‘ರೈತರ ಆದಾಯ ಎರಡೇ ವರ್ಷದಲ್ಲಿ ದುಪ್ಪಟ್ಟು’-ಎಚ್ಡಿಕೆ

Kannada News

18-10-2017

ಬೆಂಗಳೂರು: ನವೆಂಬರ್ ಒಂದರಿಂದ ರಾಜ್ಯ ಪ್ರವಾಸ ಆರಂಭಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ. ಜನ ನಮಗೆ ಅಧಿಕಾರ ನೀಡಲಿ. ಎರಡೇ ವರ್ಷದಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡಿ ತೋರಿಸುತ್ತೇನೆ. ಇದೇ ಕಾರಣಕ್ಕಾಗಿ ಇಸ್ರೇಲ್‍ಗೂ ಹೋಗಿ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಬಂದಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. ನಿಲ್ಲಲಿ. ಚುನಾವಣೆಗೆ ನಾವೂ ತಯಾರಾಗುತ್ತಿದ್ದೇವೆ, ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಹೆಚ್.ವಿಶ್ವನಾಥ್ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಒಂದು ಕಾಲದಲ್ಲಿ ಬಿಜೆಪಿಗೆ ಹೋಗಲು ಸಿದ್ದವಾಗಿ ನಿಂತಿದ್ದರು. ಈ ಕುರಿತು ಮುಕುಡಪ್ಪ ಹಾಗೂ ಕೋದಂಡರಾಮಯ್ಯ ಅವರನ್ನು ಕೇಳಿ ನೋಡಿ. ಈಗ ಅದೇ ಬಿಜೆಪಿಯನ್ನು ಇವರು ಕೋಮುವಾದಿ ಅನ್ನುತ್ತಾರೆ ಎಂದು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.

ಅಕ್ಟೋಬರ್ 25 ರಂದು ನಡೆಯಲಿರುವ ವಿಧಾನಸೌಧದ ವಜ್ರ ಮಹೋತ್ಸವದ ಕುರಿತು ಮಾತನಾಡಲು ಅಸಹ್ಯವಾಗುತ್ತಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ, ಒಂದು ಕಪ್ ನೀರು ಕುಡಿಯದಂತೆ ವಾಪಸ್ ಬನ್ನಿ ಎಂದು ನಮ್ಮ ಶಾಸಕರಿಗೆ ಮನವಿ ಮಾಡಿಕೊಳ್ಳುವುದಾಗಿ ಅವರು ನುಡಿದರು.

ದೇವೇಗೌಡರು ತೀರಿಕೊಂಡ ನಂತರ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆಡಿದ ಮಾತಿಗೆ ಕೆಂಡ ಕಾರಿದ ಅವರು, ಇಂತಹ ಕೀಳು ಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ, ಬೇಕಿದ್ದರೆ ನಾವು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇವೆ. ಬೇರೆ ಪಕ್ಷದ ಬಾಗಿಲು ತಟ್ಟುವುದಿಲ್ಲ ಎಂದು ನುಡಿದರು.

ನಾನಿನ್ನೂ ಬದುಕಿದ್ದೇನೆ. ಪಕ್ಷ ಕಟ್ಟಿ ತೋರಿಸುತ್ತೇನೆ, ಮುಂದೆ ಪಕ್ಷ ಅಧಿಕಾರಕ್ಕೆ ಬರುವುದನ್ನು ಇವರೆಲ್ಲ ಕಣ್ಣಾರೆ ನೋಡಲಿದ್ದಾರೆ, ಆದರೆ ಇಂತಹ ಮಾತುಗಳನ್ನಾಡುವುದು ಸರಿ ಅಲ್ಲ ಎಂದು ನುಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ