ಅಮಿತ್ ಷಾ ರಾಜೀನಾಮೆಗೆ ಆಗ್ರಹ

Kannada News

18-10-2017 281

ಬೆಂಗಳೂರು: ಕಾನೂನುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಭಾರೀ ಹಣಕಾಸಿನ ವ್ಯವಹಾರ ನಡೆಸಿರುವ ಪುತ್ರ ಜೈಷಾ ಪ್ರಕರಣದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಐಸಿಸಿ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಇಂದಿಲ್ಲಿ ಆಗ್ರಹಿಸಿದ್ದಾರೆ.

2004 ರಿಂದ 2010ರವರೆಗೆ 18 ಲಕ್ಷ ರೂ.ನ ವ್ಯವಹಾರ ನಡೆಸುತ್ತಿದ್ದ ಜೈಷಾ 2013, 14 ಮತ್ತು 2014- 15 ರಲ್ಲಿ ಹಣಕಾಸಿನ ವ್ಯವಹಾರವನ್ನು 16 ಸಾವಿರ ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಕೇಂದ್ರದ ಹಲವು ಇಲಾಖೆಗಳು ಕೈಜೋಡಿಸಿದ್ದು, ಅಧಿಕಾರ ದುರ್ಬಳಕೆಯ ಹಿನ್ನೆಲೆಯಲ್ಲಿ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಜೈಷಾ ಅಕ್ರಮವಾಗಿ ನಡೆಸಿರುವ ಹಣಕಾಸಿನ ವ್ಯವಹಾರವನ್ನು ಹಾಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ನ್ಯಾಯ ಮತ್ತು ನಿಸ್ಪಕ್ಷಪಾತ ತನಿಖೆ ನಡೆಯಬೇಕಾದರೆ, ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಕಾನೂನು ಬಾಹಿರವಾಗಿ ಹಣಕಾಸಿನ ವ್ಯವಹಾರ ನಡೆಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಉತ್ತರಿಸಬೇಕು ಎಂದಿದ್ದಾರೆ. ಅಲ್ಲದೇ ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಕ್ರಮವಾಗಿ ರಾಬರ್ಟ್ ವಾದ್ರಾ ವ್ಯವಹಾರ ನಡೆಸಿದ್ದರೆ, ಆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತನಿಖೆ ನಡೆಸಲಿ. ಇದಕ್ಕೆ ಕಾಂಗ್ರೆಸ್ ಪಕ್ಷದ್ದು ಏನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ