ಕ್ಷಣಮಾತ್ರದಲ್ಲಿ ಪಾರಾದ ನಾಲ್ವರು !

Kannada News

17-10-2017

ಬೆಂಗಳೂರು: ಯಶವಂತಪುರದ ಬಿ.ಕೆ.ನಗರದಲ್ಲಿಂದು, ಮಳೆಯಿಂದ ನೆಂದಿದ್ದ 25ವರ್ಷಗಳ ಹಳೇ ಕಟ್ಟಡ ಎಕಾಎಕಿ ಕುಸಿದು ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಪಾರಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಯಶವಂತಪುರದ ಬಿಕೆನಗರದಲ್ಲಿನ ಚಿಕ್ಕರಾಮಣ್ಣ ಅವರ ಕಟ್ಟಡ ಕಳೆದ ಎರಡು ತಿಂಗಳಿಂದ ಸುರಿದ ಭಾರೀ ಮಳೆಗೆ ನೆನೆದು ನೆನೆದು ಕುಸಿದಿದ್ದು, ಮನೆಯಲ್ಲಿದ್ದ ನಾಲ್ವರೂ ಅಪಾಯದಿಂದ ಕ್ಷಣಮಾತ್ರದಲ್ಲಿ ಪಾರಾಗಿದ್ದಾರೆ. ಕಳೆದ 13 ವರ್ಷಗಳಿಂದ ಈ ಮನೆಯನ್ನು ಬಾಡಿಗೆಗೆ ನೀಡಲಾಗಿದ್ದು, ಪತಿ ಪತ್ನಿ  ಇಬ್ಬರು ಮಕ್ಕಳಿದ್ದ ಕುಟುಂಬ ವಾಸವಾಗಿತ್ತು. ಮನೆ ಬಿರುಕು ಬಿಡುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಎಚ್ಚರಿಸಿದ ನಂತರ ಎಲ್ಲರೂ ಮನೆಯಿಂದ ಹೊರಬಂದಿದ್ದಾರೆ.

ಹಳೇ ಕಟ್ಟಡದಲ್ಲಿ ಕೆಳಗಡೆ ಎರಡು ಅಂಗಡಿಗಳನ್ನು, ಮೇಲೆ ಒಂದು ಮನೆಯನ್ನ ಬಾಡಿಗೆಗೆ ನೀಡಲಾಗಿತ್ತು. ದಿನಸಿ ಅಂಗಡಿಯಾಗಿದ್ದರಿಂದ ಇಲಿ-ಹೆಗ್ಗಣ ತಳಹದಿಯಲ್ಲಿ ಬಿಲಗಳನ್ನು ಮಾಡಿಕೊಂಡಿದ್ದವು. ಬಿಲಗಳಲ್ಲಿ ನೀರು ನುಗ್ಗಿ ತಳಹದಿ ಕುಸಿದ ಪರಿಣಾಮ ಬಿಲ್ಡಿಂಗ್ ಎರಡು ಅಡಿಗಳಷ್ಟು ವಾಲಿದೆ. ಪರಿಣಾಮ ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಮಣ್ಣಿನಿಂದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕಟ್ಟಡದ ಹಿಂದೆ ನಾಲ್ಕು ಶೀಟ್ ಮನೆಗಳಿದ್ದವು. ಹೀಗಾಗಿ ಕಟ್ಟಡ ಹಿಂದೆ ಬಿದ್ದಿದ್ದರೆ ದೊಡ್ಡ ಅನಾಹುತ ಅಗುತ್ತಿತ್ತು. ಯಶವಂತಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ