ದೇಶದ ಅತಿ ಶ್ರೀಮಂತ ಪಕ್ಷ ಯಾವುದು ಗೊತ್ತಾ..?

Kannada News

17-10-2017

ನೀವು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿ ನೋಡಿರ್ತೀರಿ, ಅಲ್ಲಿ ಬಿಲ್ ಗೇಟ್ಸ್‌, ವಾರೆನ್ ಬಫೆಟ್‌, ಮಿತ್ತಲ್ ಇತ್ಯಾದಿ ಹೆಸರುಗಳನ್ನು ಗಮನಿಸಿರ್ತೀರಿ. ಅದೇ ರೀತಿ, ದೇಶದ ಅತ್ಯಂತ ದೊಡ್ಡ ಶ್ರೀಮಂತರ ಪಟ್ಟಿಯನ್ನೂ ನೋಡಿ, ಅದರಲ್ಲಿ ಅಂಬಾನಿಗಳು, ಅಜೀಂ ಪ್ರೇಮ್‌ಜಿ ಮುಂತಾದವರ ಹೆಸರನ್ನು ಮತ್ತು ಅವರಲ್ಲಿರುವ ಹಣ, ಆಸ್ತಿಗಳ ವಿವರಣೆಯನ್ನೂ ನೋಡಿ ಅಬ್ಬಬ್ಬಾ ಅಂದಿರ್ತೀರಿ.

ಅದೇ ರೀತಿ ನಮ್ಮ ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷಗಳ ಪಟ್ಟಿಯೂ ಬಿಡುಗಡೆ ಆಗಿದೆ. ಇವತ್ತು, ಯಾವ ಪಕ್ಷದವರ ಹತ್ತಿರ ತುಂಬಾ ಜಾಸ್ತಿ ಹಣ ಇದೆ ನೀವೇ ಊಹೆ ಮಾಡಿ ನೋಡೋಣ. ಏನಂದ್ರಿ ಕಾಂಗ್ರೆಸ್ಸಾ, ಅಲ್ಲಾ ಸ್ವಾಮಿ ಈಗ ಬಿಜೆಪಿಯವರೇ ಅತ್ಯಂತ ಶ್ರೀಮಂತರು, ಆದ್ರೆ ತುಂಬಾ ವರ್ಷಗಳ ಕಾಲ ಭಾರತದ ಅತಿ ಶ್ರೀಮಂತ ಪಕ್ಷ ಆಗಿದ್ದ ಕಾಂಗ್ರೆಸ್ ಕೂಡ, ಈಗಲೂ ತೀರಾ ಹಿಂದೆ ಏನೂ ಬಿದ್ದಿಲ್ಲ ಬಿಡಿ.

ದಿ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರೀಫಾರ್ಮ್ಸ್‌ ಅನ್ನುವ ಸಂಸ್ಥೆ, ಬಿಜೆಪಿ, ಕಾಂಗ್ರೆಸ್, ಮಾಯಾವತಿಯ ಬಿಎಸ್‌ಪಿ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್  ಸೇರಿದಂತೆ ದೇಶದ 7 ರಾಷ್ಟ್ರೀಯ ಪಕ್ಷಗಳ ಹಣದ ಚೀಲಗಳು ಎಷ್ಟು ದೊಡ್ಡದಾಗಿವೆ ಎಂಬ ಬಗ್ಗೆ ಒಂದು ವರದಿ ಬಿಡುಗಡೆ ಮಾಡಿದೆ.

2015-16ನೇ ಸಾಲಿನಲ್ಲಿ 894 ಕೋಟಿ ರೂಪಾಯಿಗಳನ್ನು ತಮ್ಮ  ಬಂಡವಾಳ ಅಥವ ಮೀಸಲು ಹಣವಾಗಿ ಹೊಂದಿದ್ದೇವೆ ಎಂದು ಘೋಷಿಸಿರುವ ಭಾರತೀಯ ಜನತಾ ಪಕ್ಷ, ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು ಮೊದಲ ಸ್ಥಾನದಲ್ಲಿದೆ. ನಮ್ಮ ಬಳಿ 759 ಕೋಟಿ ರೂಪಾಯಿಗಳಷ್ಟು ಹಣವಿದೆ ಎಂದು ತಿಳಿಸಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನದಲ್ಲಿದೆ. ಬಿಎಸ್‌ಪಿ 557 ಕೋಟಿ ಮೀಸಲು ಹಣ ಹೊಂದಿದ್ದರೆ, ಸಿಪಿಎಂ  432 ಕೋಟಿ ರೂಪಾಯಿಗಳನ್ನು ತನ್ನ ಅಕೌಂಟಿನಲ್ಲಿ ಇಟ್ಟುಕೊಂಡಿದೆ. 

ರಾಜಕೀಯ ಪಕ್ಷಗಳು ಹೊಂದಿರುವ ಆಸ್ತಿ, ಹಣದ ಬಗ್ಗೆ, ಅವುಗಳ ಏರಿಕೆ ಇಳಿಕೆ ಬಗ್ಗೆ, ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರೀಫಾರ್ಮ್ಸ್‌ ಸಂಸ್ಥೆ, ಕಳೆದ 11 ವರ್ಷಗಳಿಂದಲೂ ಒಂದು ಕಣ್ಣಿಟ್ಟಿದೆ, ದೇಶದ  ಜನರಿಗೆ  ಮಾಹಿತಿ ನೀಡುತ್ತಾ ಬಂದಿದೆ.  

2014-15ರ ವರೆಗೂ ಕಾಂಗ್ರೆಸ್ ಪಕ್ಷವೇ ಮೊದಲ ಸ್ಥಾನದಲ್ಲಿದ್ದು ಬೇರೆಲ್ಲಾ ಪಕ್ಷಗಳಿಂತ ಹೆಚ್ಚು ಆಸ್ತಿ ಮತ್ತು ಹಣ ಹೊಂದಿತ್ತು.  ಅಧಿಕಾರ ಇರುವವರ ಕಡೆಗೆ ಹೆಚ್ಚಿನ ಒಲವು ವ್ಯಕ್ತವಾಗುವುದು ಸಹಜ ಎಂಬಂತೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಗೆ ಹೆಚ್ಚಿನ ದೇಣಿಗೆ ಹರಿದು ಬಂದಿದೆ.

ತಮ್ಮ ಪಕ್ಷದ ಸಂಪತ್ತು ಹೆಚ್ಚಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯವರು, ‘ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಚಾರದಲ್ಲಿ ಪಾರದರ್ಶಕತೆ ತರಲು ನಾವು ಅಭಿಯಾನ ನಡೆಸಿದ್ದೇ ಇದಕ್ಕೆ ಕಾರಣ’ ಎಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ ಕೂಡ, ಕಾಂಗ್ರೆಸ್ ಪಕ್ಷದ ಸಂಪತ್ತಿನಲ್ಲಿ ಅಂತಹ ಹೆಚ್ಚಿನ ಕುಸಿತವೇನೂ ಆಗಿಲ್ಲ ಅನ್ನುವ ಕುತೂಹಲಕಾರಿ ಅಂಶವನ್ನೂ ಈ ವರದಿ ಬಹಿರಂಗಪಡಿಸಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ