ತೀರ್ಥೋದ್ಭವ ಕಣ್ತುಂಬಿಕೊಂಡ ಭಕ್ತಸಾಗರ

Kannada News

17-10-2017

ಬೆಂಗಳೂರು: ನಾಡಿನ ಜೀವನದಿ, ಕೊಡವರ ಅಧಿವೇವತೆ ಪುರಾಣ ಪ್ರಸಿದ್ಧ ಕಾವೇರಿ ಇಂದು ಮಧ್ಯಾಹ್ನ ಸಾವಿರಾರು ಭಕ್ತರ ಉದ್ಘೋಷದ ನಡುವೆ ಉಕ್ಕಿ ಹರಿದಾಗ ಜನ ಸ್ತೋಮ ಪುಳಕದಿಂದ ರೋಮಾಂಚನಗೊಂಡಿತು. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಉಗಮಸ್ಥಾನವಾದ ತಲಕಾವೇರಿಯಲ್ಲಿರುವ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದಳು. ವರ್ಷಕ್ಕೊಮ್ಮೆ ನಡೆಯುವ ಈ ಕ್ಷಣಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ತೀರ್ಥೋದ್ಭವವಾದ ಬಳಿಕ, ತೀರ್ಥ ಕೊಂಡೊಯ್ಯಲು ಭಕ್ತರು ಮುಗಿಬಿದ್ದರು. ಇದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. 18 ಮಂದಿ ಅರ್ಚಕರು ಮಹಾಪೂಜೆ ನೆರವೇರಿಸಿದರು. ಕುಂಕುಮಾರ್ಚನೆ, ಅಭಿಷೇಕ ನಡೆದ ಬಳಿಕ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕಿದಳು. ಈ ಸಂದರ್ಭ ಜಯಘೋಷಗಳು ಮೊಳಗಿದವು.

ಚಿನ್ನಾಭರಣದೊಂದಿಗೆ ಕಾವೇರಿ ಮಾತೆ ಕಂಗೊಳಿಸುತ್ತಿದ್ದಳು. ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ನೇತೃತ್ವದಲ್ಲಿ ಸಂಪ್ರದಾಯಿಕ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಅನಂತಕೃಷ್ಣಾಚಾರ್, ರಾಮಕೃಷ್ಣಾಚಾರ್, ನಾರಾಯಣಾಚಾರ್ ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಡಗು ಏಕೀಕರಣ ರಂಗವು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿತ್ತು. ಜೊತೆಗೆ ಮಂಡ್ಯದ ರೈತರು ಅಕ್ಕಿ, ಬೆಲ್ಲ, ತೆಂಗಿನಕಾಯಿ ಕಳುಹಿಸಿದ್ದರು.

ಭಾಗಮಂಡಲದ ಭಗಂಡೇಶ್ವರನ ದೇಗುಲದಲ್ಲೂ ತುಲಾ ಸಂಕ್ರಮಣ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಕಾವೇರಿ, ಸುಜ್ಯೋತಿ ಹಾಗೂ ಕನ್ನಿಕೆ ನದಿಯ ಸಂಗಮದ ಸ್ಥಳದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನೂರಾರು ಮಂದಿ ಪಿಂಡ ಪ್ರದಾನ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೊಡವರ ಸಾಂಪ್ರದಾಯಿಕ ಪೂಜಾ-ಕೈಂಕರ್ಯಗಳು ನೆರವೇರಿದ ಬೆನ್ನಲ್ಲೇ, ತೀರ್ಥೋದ್ಭವವಾಯಿತು.

ರಾಜ್ಯ ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಹರಾಷ್ಟ್ರಗಳಿಂದಲೂ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಂತೋಷದಿಂದ ಮುನ್ನುಗ್ಗಿ ಕಾವೇರಿ ತೀರ್ಥವನ್ನು ಪ್ರೋಕ್ಷಿಸಿಕೊಂಡು ಪುನೀತರಾದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಕಾವೇರಿ ಮಾತೆಯ ದರ್ಶನ ಪಡೆದರು. ವರ್ಷಕ್ಕೊಮ್ಮೆ ನಡೆಯುವ ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಸಾಲಿನಲ್ಲಿ ನೂಕು ನುಗ್ಗಲು ಉಂಟಾದಾಗ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಯಂತ್ರಿಸಲು ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಪ್ರದೇಶದಲ್ಲಿ 40 ಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಈ ಸಂದರ್ಭ ಅನೇಕ ಜನ ಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಸ್ತುವಾರಿ ವಹಿಸಿದ್ದರು.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ