ಇದೇನು ಸರ್ವಾಧಿಕಾರವೇ.? ಉಪಸಭಾಪತಿ ಕಿಡಿ !

Kannada News

16-10-2017

ಬೆಂಗಳೂರು: ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿರುವ ಆರು ನೂರು ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಲಪಟಾಯಿಸಿ ಅದನ್ನು ಮುಚ್ಚಲು ಸರ್ಕಾರ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕರು ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಹೊರಟಿರುವ ಸರ್ಕಾರದ ಪ್ರಯತ್ನ ನಿಲ್ಲದಿದ್ದರೆ ಮೈಸೂರಿಂದ ಬೆಂಗಳೂರು ಚಲೋ ಹೋರಾಟ ನಡೆಸುವುದಲ್ಲದೇ ಉನ್ನತ ಶಿಕ್ಷಣ ಸಚಿವರ ಕಛೇರಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಪುಟ್ಟಣ್ಣ ಮತ್ತಿತರರು ಈ ಆರೋಪ ಮಾಡಿದ್ದಲ್ಲದೆ, ಈ ವಿವಿಯ ಪುನರುಜ್ಜೀವನದ ಹೆಸರಿನಲ್ಲಿ ರಚಿಸಿರುವ ಸಮಿತಿಯನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಹಿಂದಿನಿಂದಲೂ ತುಂಬ ಚೆನ್ನಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಕೆಲ ಷರತ್ತುಗಳನ್ನು ಹಾಕಿ ಯುಜಿಸಿ ಈ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಿತು. ಅದು ಯಾವ ಆಧಾರದ ಮೇಲೆ ಮಾನ್ಯತೆ ರದ್ದುಪಡಿಸಿರುವುದಾಗಿ ಹೇಳಿತೋ? ಅದನ್ನೆಲ್ಲ ಪರಿಗಣಿಸಿ ಆಗಿರುವ ಲೋಪಗಳನ್ನು ಸರಿಪಡಿಸಲಾಗಿದೆ.

ಹೀಗೆ ಸರಿ ಪಡಿಸಿದ ನಂತರ ಸುಮಾರು ನಲವತ್ತು ಸಾವಿರ ಪುಟಗಳಷ್ಟು ಮಾಹಿತಿಯನ್ನು ಒದಗಿಸಿ ಮಾನ್ಯತೆಯನ್ನು ನವೀಕರಿಸಲು ವಿಶ್ವವಿದ್ಯಾಲಯ ಈಗಾಗಲೇ ಅರ್ಜಿ ಹಾಕಿದೆ. ಆದರೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವಿವಿಯ ಪುನರಾರಂಭಕ್ಕೆ ಸಂಬಂಧಿಸಿದಂತೆ ಒಂದು ಬಾರಿಯೂ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ.

ಬದಲಿಗೆ ಒಂದು ಸಮಿತಿಯನ್ನು ರಚಿಸಿ ವಿವಿಯ ಪುನರುಜ್ಜೀವಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಹೇಳಿದ್ದಾರೆ. ಒಂದು ಕಡೆ ಸಚಿವರೇ, ವಿಶ್ವವಿದ್ಯಾಲಯಗಳ ಮೇಲೆ ನಮಗೆ ಹಿಡಿತವಿಲ್ಲ ಎನ್ನುತ್ತಾರೆ. ಮತ್ತೊಂದು ಕಡೆ ಸಮಿತಿಯನ್ನು ರಚಿಸುತ್ತಾರೆ. ಇದು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಯಾವ ಕಾರಣಕ್ಕೂ ವಿಶ್ವವಿದ್ಯಾಲಯವನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಾರೆ. ಆದರೆ ಮತ್ತೊಂದು ಕಡೆ ಅಲ್ಲಿರುವ ಹಣವನ್ನು ಲಪಟಾಯಿಸಲು ಉನ್ನತ ಶಿಕ್ಷಣ ಸಚಿವರು ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇವರು ಮೈಸೂರಿನ ಮುಕ್ತ ವಿವಿಗೆ ಮಾನ್ಯತೆ ನವೀಕರಿಸಿ ಎಂದು ಕೇಂದ್ರದ ಮೇಲೆ ಒತ್ತಡ ಹೇರುವುದಿಲ್ಲ. ಬದಲಿಗೆ ವಿಟಿಯುನಿಂದ ಕೇಂದ್ರ ಹಿಂಪಡೆದಿರುವ ನಾಲ್ಕು ನೂರು ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವಾಪಸ್ ಕೊಡಿ ಎಂದು ಹದಿನಾರು ಬಾರಿ ಸಂಬಂಧಪಟ್ಟವನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತಾರೆ.

ಇದನ್ನೆಲ್ಲ ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಇವರಿಗೆ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿರುವ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿಸಿ ಅಲ್ಲಿರುವ ದುಡ್ಡನ್ನು ಲಪಟಾಯಿಸುವುದನ್ನು ಬಿಟ್ಟರೆ ಬೇರೆ ಉದ್ದೇಶವೇ ಇಲ್ಲ ಎಂದರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ರಾಜ್ಯ ಬಿಜೆಪಿಯ ಉಸ್ತುವಾರಿಗೂ ನೇಮಕಗೊಂಡಿದ್ದಾರೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಲು ನಡೆಯುತ್ತಿರುವ ಸಂಚಿಗೆ ಉತ್ತರ ಹೇಳುವ ಕೆಲಸ ಅವರಿಂದಾಗುತ್ತಿಲ್ಲ. ಉತ್ತರ ನೀಡುವ ಕೆಲಸ ಅವರಿಂದಾಗದಿದ್ದರೆ ಯಾವ ಮುಖ ಹೊತ್ತು ಕರ್ನಾಟಕಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನಾಲಯದ ಆಯುಕ್ತ ಅಜಯ್ ನಾಗಭೂಷಣ್ ವಿರುದ್ಧ ಸತತ ಟೀಕಾ ಪ್ರಹಾರ ನಡೆಸಿದ ಅವರು, ವಿವಿಧ ಹುದ್ದೆಗಳಿಗಾಗಿ ಇಲಾಖೆಗೆ ನೇಮಕಾತಿ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳ ಪಟ್ಟಿ ನೀಡಿದರೂ, ಸರ್ಕಾರಿ ಆದೇಶ ಹೊರಟರೂ ಬಹುತೇಕರಿಗೆ ನೇಮಕಾತಿ ಆದೇಶವನ್ನೇ ಅವರು ನೀಡುತ್ತಿಲ್ಲ ಎಂದು ದೂರಿದರು.

ಬದಲಿಗೆ ಪರೀಕ್ಷಾ ಪ್ರಾಧಿಕಾರದ ಪಟ್ಟಿ ಹಾಗೂ ಸರ್ಕಾರಿ ಆದೇಶವನ್ನು ಕಾನೂನು ಇಲಾಖೆಯ ಸಲಹೆಗೆ ಕಳಿಸಿದ್ದಾರೆ. ಇದು ಸರ್ಕಾರವೇ ಕಾನೂನು ಬದ್ಧವೇ ಅಲ್ಲವೇ ಎಂದು ಕೇಳಿದಂತೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗಿರುವ ಸಮಸ್ಯೆಯ ಕುರಿತು ಹೋಗಿ ಹೇಳಿದರೆ ಸರಿ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ ಶಾಸಕರು ಹಿಂತಿರುಗಿದ ಬಳಿಕ ಅಭ್ಯರ್ಥಿಗಳಿಗೆ, ಇಲ್ಲೇ ನಿಂತರೆ ಜೈಲಿಗೆ ಹಾಕಿಸುತ್ತೇನೆ ಎಂದು ಹೇಳುತ್ತಾರೆ. ಇದೇನು ಸರ್ವಾಧಿಕಾರವೇ? ಎಂದು ಅಬ್ಬರಿಸಿದರು.

ಶಾಸಕರು ಎಂದರೆ ಅಷ್ಟೊಂದು ಲಘುವಾಗಿ ತೆಗೆದುಕೊಂಡಿದ್ದಾರಾ ಇವರು? ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಅಲೆದಾಡುತ್ತಿದ್ದಾರೆ. ಕೆಲವರಂತೂ ರೋಗಪೀಡಿತರಾಗಿ ಪರದಾಡುವ ಸ್ಥಿತಿ ಬಂದಿದೆ. ಆದರೂ ಇವರು ಸರ್ಕಾರ ಹೇಳಿದಂತೆ ಕೇಳುವುದಿಲ್ಲ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ