ಕಾರ್ ಚಾಲಕನ ಕಿಡ್ನಾಪ್ !

Kannada News

16-10-2017

ಬೆಂಗಳೂರು: ಹಾರೋಹಳ್ಳಿ ಮುಖ್ಯರಸ್ತೆಯ ಸಾರಕ್ಕಿ ಗೇಟ್ ಬಳಿ, ಟ್ರಾವೆಲ್ ಏಜೆನ್ಸಿಯ ಕಾರು ಚಾಲಕನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಬೇರೊಂದು ವಾಹನದಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ನವೀನ್‍ ನನ್ನು ರಕ್ಷಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸೌಜನ್ಯ ಟ್ರಾವೆಲ್ಸ್ ನ ಕಾರು ಚಾಲಕನಾಗಿದ್ದ ನವೀನ್, ರಾತ್ರಿ ಇಂಡಿಕಾ ಕಾರನ್ನು ಚಲಾಯಿಸಿಕೊಂಡು ಹಾರೋಹಳ್ಳಿಯಿಂದ ನಗರಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಹಾರೋಹಳ್ಳಿ ಮುಖ್ಯರಸ್ತೆಯ ಸಾರಕ್ಕಿ ಗೇಟ್ ಬಳಿ ಹಿಂದಿನಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು ಇಂಡಿಕಾ ಕಾರನ್ನು ಹಿಂದಿಕ್ಕಲು ಹೋಗಿದೆ.

ಆಯತಪ್ಪಿ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದು ಹಾನಿಯಾಗಿದ್ದರಿಂದ ಕಾರು ನಿಲ್ಲಿಸಿ ಸ್ವಿಫ್ಟ್ ಕಾರಿನಲ್ಲಿದ್ದವರನ್ನು ಪ್ರಶ್ನಿಸಲು ಹೋಗಿದ್ದಾರೆ, ಆಕ್ರೋಶಗೊಂಡ ಸ್ವಿಫ್ಟ್ ಕಾರಿನಲ್ಲಿದ್ದ ಕುಡಿದ ಮತ್ತಿನಲ್ಲಿದ್ದ ಪುಂಡರ ಗ್ಯಾಂಗ್ ನವೀನ್‍ ನನ್ನು ಹಿಗ್ಗಾಮುಗ್ಗ ಥಳಿಸಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ನವೀನ್‍ ನನ್ನು ಅಪಹರಿಸಿ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ವಾಹನವೊಂದರಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ನವೀನ್‍ ರನ್ನು ರಕ್ಷಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ