ಇನ್ಮೇಲೆ ಕನ್ನಡ ಕಲಿಕೆ ಕಡ್ಡಾಯ !

Kannada News

16-10-2017

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಕನ್ನಡ ಕಲಿಕೆ ಕಡ್ಡಾಯ ಆಶಯದಡಿ ಸರ್ಕಾರ ಇದೀಗ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯದ ಪಠ್ಯಕ್ರಮ ಬೋಧಿಸುವ ಆಂಗ್ಲ ಮಾಧ್ಯಮ ಶಾಲೆಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕಿದೆ.

2015ರಲ್ಲಿ ಜಾರಿಗೊಳಿಸಿರುವ ಕನ್ನಡ ಭಾಷಾ ಕಲಿಕೆ ಕಾಯ್ದೆ– 2015ಕ್ಕೆ ನಿಯಮಗಳನ್ನು ರೂಪಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2017–18) ಒಂದನೇ ತರಗತಿಗೆ ಕನ್ನಡ ಕಡ್ಡಾಯವಾಗಲಿದೆ. 2026– 27ರ ವೇಳೆಗೆ ಹತ್ತನೇ ತರಗತಿವರೆಗೂ ಸರ್ಕಾರದ ಆದೇಶ ಅನ್ವಯವಾಗಲಿದೆ.

ಹೊರ ರಾಜ್ಯಗಳಿಂದ ವಲಸೆ ಬಂದು 2ರಿಂದ 8ನೇ ತರಗತಿವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಒಂದನೇ ತರಗತಿಗೆ ನಿಗದಿ‍ಪಡಿಸಿದ ಕನ್ನಡ ಭಾಷಾ ಪಠ್ಯ ಬೋಧಿಸಬೇಕು. ಎರಡು ಮತ್ತು ಆನಂತರದ ವರ್ಷಗಳಲ್ಲಿ ಎರಡನೇ ತರಗತಿ ಮತ್ತು ಅನುಕ್ರಮವಾಗಿ ಮೇಲಿನ ತರಗತಿಗಳ ಪಠ್ಯಗಳನ್ನು ಕಲಿಸಬೇಕು. ಒಂಬತ್ತು ಅಥವಾ 10ನೇ ತರಗತಿ ಸೇರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ನಿಗದಿಪಡಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ