ಕರ್ನಾಟಕದಲ್ಲಿ ಮದ್ಯ ನಿಷೇಧ !

Kannada News

16-10-2017

ಈಗಾಗಲೇ ಸಿಎಂ ಸಿದ್ದರಾಮಯ್ಯ ಅನೇಕಾನೇಕ ಭಾಗ್ಯಗಳನ್ನು ಘೋಷಿಸಿಬಿಟ್ಟಿರುವುದರಿಂದ ಬಿಜೆಪಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲಾದರೂ ಅದೇ ರೀತಿಯ ಯೋಜನೆಗಳನ್ನು ಹಾಕಿಕೊಂಡು ಚುನಾವಣೆಗೆ ಹೋದರೆ ಕಾಂಗ್ರೆಸ್ಸನ್ನು ಕಾಪಿ ಮಾಡಿದ್ದಾರೆ ಎನ್ನುವ ಅಪವಾದವನ್ನು ಮೈ ಮೇಲೆ ಎಳೆದುಕೊಳ್ಳಬೇಕಾದೀತು ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆ. ಯುವಕರಿಗೆ, ಮಹಿಳೆಯರಿಗೆ, ಬಡಬಗ್ಗರಿಗೆ ಹಿಂದುಳಿದವರಿಗೆ ಮತ್ತು ನಗರವಾಸಿಗಳಿಗೆ ಈಗಾಗಲೇ ಅನೇಕ ಆಕರ್ಷಕ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಸರ್ಕಾರ ಮುಂದಿಟ್ಟಿರುವುದರಿಂದ ಜನರನ್ನು ಆಕರ್ಷಿಸಲು ಏನು ಮಾಡಬೇಕು ಎಂಬ ತಲೆನೋವು ಬಿಜೆಪಿಯನ್ನು ಕಾಡುತ್ತಿದೆ. ಅದಕ್ಕಾಗಿ ಏನಾದಾರೂ ಮಾಡಿ ಜನರನ್ನು ಆಕರ್ಷಿಸುವ ಘೋಷಣೆಯೊಂದಿಗೆ ಚುನಾವಣೆಗೆ ಹೋಗಬೇಕು ಎಂದು ಬಿಜೆಪಿಯ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಯೋಚಿಸಲು ಶುರು ಮಾಡಿದ್ದಾರೆ. 

ಮಹಿಳೆಯರ ಮತ ಬಹಳ ದೊಡ್ಡ ರೀತಿಯಲ್ಲಿ ನಿರ್ಣಾಯಕ ವಾಗುವುದರಿಂದ ಮಹಿಳೆಯರನ್ನು ಸೆಳೆಯಲು ಬಿಜೆಪಿ ಹೊಸ ಗಾಳದ ತಯಾರಿಯಲ್ಲಿದೆ. ಆ ಆಲೋಚನೆಯೊಂದಿಗೆ ಮಹಿಳೆಯರನ್ನುದ್ದೇಶಿಸಿ ಕರ್ನಾಟಕವನ್ನು ಮದ್ಯಪಾನ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಹೇಳಿದರೆ ಅವರ ಮತಗಳು ಅನಾಯಾಸವಾಗಿ ಬಿಜೆಪಿ ಬುಟ್ಟಿಗೆ ಬೀಳುತ್ತವೆ ಎಂಬ ಲೆಕ್ಕಾಚಾರ ನಡೆದಿದೆ. ಈಗಾಗಲೇ, ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಪಾನ ನಿಷೇಧದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಮದ್ಯಪಾನದ  ವಿರುದ್ಧದ ನಿಲುವು ಬಿಜೆಪಿಗೆ ಲಾಭದಾಯಕವಾಗುತ್ತದೆ ಎಂಬ ಚಿಂತನೆ ಬಿಜೆಪಿ ತಂತ್ರ ಪಟುಗಳ ಯೋಚನೆಯಾಗಿದೆ. ಈ ರೀತಿ ಬಿಜೆಪಿ ತನ್ನ ಚುನಾವಣಾ ಆಶ್ವಾಸನೆಗಳಲ್ಲಿ ಮದ್ಯಪಾನ ಮುಕ್ತ ಕರ್ನಾಟಕದ ಪ್ರಸ್ತಾವನೆಯನ್ನು ಮತದಾರರ ಮುಂದಿಡುವುದು ಬಹುತೇಕ ಖಚಿತವಾಗಿದೆ. 

ಬಿಜೆಪಿ ನಾಯಕ ಯಡಿಯೂರಪ್ಪ ಕೂಡ ಮದ್ಯಪಾನದ ವಿರೋಧಿಯಾಗಿರುವುದರಿಂದ ಈ ಪ್ರಸ್ತಾವನೆಗೆ ಹೆಚ್ಚು ಪುಷ್ಟಿ ದೊರಕುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಆದರೆ ಮದ್ಯದ ವಹಿವಾಟಿನಿಂದ ಹೆಚ್ಚು ಆದಾಯವನ್ನು ಪಡೆಯುವ ಕರ್ನಾಟಕ ಮತ್ತು ಮದ್ಯ ಸಂಬಂಧಿತ ವ್ಯಾಪಾರಗಳಲ್ಲಿ ತೊಡಗಿರುವ ಲಕ್ಷಾಂತರ ಮಂದಿ ಇದರಿಂದ ಏನು ಪರಿಣಾಮ ಎದುರಿಸಬೇಕಾಗಬಹುದೆಂಬುದನ್ನು ಕಾದು ನೋಡಬೇಕಾಗಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ