ಮತ್ತೊಮ್ಮೆ ಪಕ್ಷಾಂತರದತ್ತ ಸಿ.ಪಿ.ಯೋಗೇಶ್ವರ್ 

Kannada News

14-10-2017

ಸಚಿವ ಡಿ.ಕೆ.ಶಿವಕುಮಾರ್ ನನ್ನ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಈಗ ಮತ್ತೊಂದು ಪಕ್ಷದತ್ತ ಮುಖಮಾಡಿದ್ದಾರೆ.
ಸಿನಿಮಾ ನಟ, ನಿರ್ಮಾಪಕರೂ ಆಗಿರುವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನನಗೆ ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಲು ಡಿಕೆಶಿ ಅವರೇ ಕಾರಣ, ಈಗ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿರುವ ಸಿ.ಪಿ. ಯೋಗೇಶ್ವರ್,  ಜೆಡಿಎಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮಾಗಡಿಯ ಶಾಸಕ ಬಾಲಕೃಷ್ಣ ಜೆಡಿಎಸ್ ಗೆ ಬೈ ಹೇಳಿ ಡಿಕೆಶಿ ಮುಖಾಂತರ ಕಾಂಗ್ರೆಸ್ ಟಿಕೆಟ್ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮತ್ತಷ್ಟು ತುಳಿಯುವ ಲೆಕ್ಕ ಡಿಕೆಶಿಯವರದ್ದು ಎಂಬ ಕಾರಣಕ್ಕಾಗಿ ಇದೀಗ ಜೆಡಿಎಸ್ನತ್ತ ವಾಲುತ್ತಿದ್ದಾರೆ.
ಹೆಚ್‌.ಡಿ.ರೇವಣ್ಣ ಮತ್ತು ಕುಮಾರಸ್ವಾಮಿ ಇಬ್ಬರು ಮಾತ್ರವೇ ನಮ್ಮ ಕುಟುಂಬದಿಂದ ಚುನಾವಣಾ ಕಣಕ್ಕಿಳಿಯುತ್ತಾರೆಂದು ಜೆಡಿಎಸ್ ವರಿಷ್ಠ ಹೆಚ್‌.ಡಿ.ದೇವೇಗೌಡರು ಹೇಳುತ್ತಿದ್ದಾರೆ. ಹೀಗಾಗಿ, ಯೋಗೇಶ್ವರ್ ಜೆಡಿಎಸ್ ಸೇರಿದ ಪಕ್ಷದಲ್ಲಿ, ಅನಿತಾ ಕುಮಾರಸ್ವಾಮಿ ಸ್ಪರ್ಧೆಗಿಳಿಯುತ್ತಾರೆ ಎಂಬ ಊಹಾಪೋಹಕ್ಕೂ ತೆರೆಬೀಳಲಿದೆ.
ದೇವರ ಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ಪಾಟಿಲ್ ನಡಹಳ್ಳಿ ಕೂಡ, ಜೆಡಿಎಸ್‌ನಿಂದಲೇ ಮುಂದಿನ ಸ್ಪರ್ಧೆ ಎಂದು ಹೇಳಿರುವುದರಿಂದ, ಅವರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಲಾಗಿದೆ. ಹೀಗಾಗಿ, ಯೋಗೇಶ್ವರ್ ಮತ್ತು ಎ.ಎಸ್.ಪಾಟೀಲ್ ಅವರು, ಬೇರೆ ಪಕ್ಷಗಳತ್ತ ಮುಖಮಾಡಿರುವುದು, ಈ ಬಾರಿಯ ಚುನಾವಣೆಗೆ ಮುನ್ನ ನಡೆಯಬಹುದಾದ ಪಕ್ಷಾಂತರ ಚಟುವಟಿಕೆಗಳ ಮೊದಲ ಸುತ್ತು ಎನ್ನಬಹುದಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ