ನೀವು ಪದೇ ಪದೇ ಕಾಯಿಲೆ ಬೀಳೋದ್ಯಾಕೆ ಗೊತ್ತಾ..?

Kannada News

14-10-2017

ನೀವು ಪದೇ ಪದೇ ಅಥವ ಹೆಚ್ಚೂ ಕಮ್ಮಿ 15 ದಿನಗಳಿಗೊಮ್ಮೆ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸ್ತಿದ್ದೇನೆ ಆದ್ರೂ ಯಾಕ್ ಹೀಗಾಗ್ತಿದೆ ಅಂತ ಗೊತ್ತಾಗ್ತಿಲ್ವಾ? ಒಂದ್ ನಿಮಿಷ ಇಲ್ಲಿ ಕೇಳಿ, ನಿಮ್ಮ ಕೆಲವು ಅಭ್ಯಾಸ ಅಥವ ದುರಭ್ಯಾಸಗಳೇ ನೀವು ಪದೇ ಪದೇ ಕಾಯಿಲೆ ಬೀಳುವ ಹಾಗೆ ಮಾಡ್ತಿರಬಹುದು.

ಮೊದಲನೇದು ಏನಪ್ಪಾ ಅಂದ್ರೆ, ನೀವು ಮುಖ ತೊಳೆಯೋದಕ್ಕೆ, ಸ್ನಾನ ಮಾಡೋದಕ್ಕೆ ಬಚ್ಚಲ ಮನೆಗೆ ಹೋದಾಗ ಅಥವ ಶೌಚಾಲಯದ ಕಮೋಡ್ ಮೇಲೆ ಕೂತಾಗಲೂ ಮೊಬೈಲ್ ಫೋನ್ ಬಳಸ್ತೀರಾ…?

ಹೀಗೇನಾದ್ರೂ ಮಾಡ್ತಿದ್ರೆ ಮೊದಲು ಇದನ್ನು ಬಿಟ್ಟುಬಿಡಿ. ಇದು ಒಂದು ಭಯಂಕರವಾದ ತಪ್ಪುಕೆಲಸ. ಏಕೆ ಅಂದರೆ, ಟಾಯ್ಲೆಟ್‌ನಲ್ಲಿ ನೀವು ಕುಳಿತುಕೊಳ್ಳುವ ಸೀಟುಗಳು, ಅದರ ಹ್ಯಾಂಡ್ಲ್‌ ಗಳು, ಫ್ಲಷ್ ಮಾಡುವ ಗುಂಡಿ ಮತ್ತು ನಲ್ಲಿಗಳ ಮೇಲೂ ಕೂಡ ಇ ಕೋಲಿ ಎಂಬ ಕೀಟಾಣುಗಳಿರುತ್ತವೆ. ಇವುಗಳು, ಹಲವು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನಿಮಗೆ ಅತಿಸಾರ ಬೇಧಿ, ಶ್ವಾಸಕೋಶದ ಸೋಂಕೂ ಕೂಡ ತಗುಲಬಹುದು.

ಎರಡನೆಯದು, ನೀವು ಹೊರಗೆ ಹಾಕಿಕೊಂಡು ಹೋಗಿ ಬಂದ ಚಪ್ಪಲಿ ಮತ್ತು  ಶೂಗಳಲ್ಲೇ ಮನೆ ಒಳಗೂ ಕೂಡ ತಿರುಗಾಡುವ ಅಭ್ಯಾಸ ಇರುವಂಥವರೇ?

ನೋಡಿ, ಈ ನಿಮ್ಮ ಪಾದರಕ್ಷೆಗಳಲ್ಲಿ ಸಿ. ಡಿಫ್ ಕೋಲಿಟಸ್ ಎಂಬ ಬ್ಯಾಕ್ಟೀರಿಯಾಗಳಿರುತ್ತವೆ. ಇವುಗಳು ಹೇಗಾದರೂ ಮಾಡಿ ನೀವು ತಿನ್ನುವ ಆಹಾರದ ತಟ್ಟೆಗೆ ಸೇರಿ, ನಿಮಗೆ ಅತಿಬೇಧಿ ಮಾಡಿಸುವುದು ಖಾತ್ರಿ. ಇದು ಆಗಬಾರದು ಅನ್ನುವ ಹಾಗಿದ್ದರೆ ‘ಕಾಲಿಗೆ ಹಾಕಿಕೊಳ್ಳುವಂಥವು ಮನೆಯ ಹೊರಗಿರಬೇಕು’ ಅನ್ನುವ ಹಿರಿಯರ ಮಾತನ್ನು ಕೇಳಿ’. ನಿಮ್ಮ ಪಾದರಕ್ಷೆಗಳನ್ನು ಮನೆಯ ಹೊರಗೆ ಬಿಡಿ.

ನೀವು ಮನೆಯಲ್ಲಿದ್ದ ಹೆಚ್ಚೂಕಮ್ಮಿ ಎಲ್ಲಾ ಸಮಯದಲ್ಲೂ ನಿಮ್ಮ ಮೊಬೈಲ್ ಪೋನ್ ಅಥವ ಟಿವಿ ರಿಮೋಟ್ ಹಿಡಿದೇ ಇರ್ತೀರಿ ಅಲ್ಲವೇ? ಇಲ್ಲೂ ಇದೆ ಸಮಸ್ಯೆ. ಎಂತೆಂಥದ್ದೋ ಕೈಗಳಲ್ಲಿ ಟಿವಿ ರಿಮೋಟ್ ಮತ್ತು ಫೋನ್ ಬಳಸುತ್ತೀರಿ ಮತ್ತೆ ಊಟ ಮಾಡುವಾಗಲೂ ಅದೇ ಕೈಗಳಿಂದ ಫೋನ್ ಮತ್ತು ರಿಮೋಟ್ ಬಳಸುತ್ತೀರಿ. ಇವೆರಡೂ ಉಪಕರಣಗಳಲ್ಲೂ ಇ ಕೋಲಿ ಎಂಬ ಕೀಟಾಣುಗಳು ಸೇರಿಕೊಂಡು ನಿಮ್ಮ ಆರೋಗ್ಯ ಕೆಡಿಸುತ್ತವೆ.  ಹೀಗಾಗಿ,  ನೀವು ಅತ್ಯಂತ ಹೆಚ್ಚು ಬಾರಿ ಬಳಸುವ ನಿಮ್ಮ ಮೊಬೈಲ್ ಫೋನ್ ಮತ್ತು ಟಿವಿ ರಿಮೋಟ್‌ಗಳನ್ನು ದಿನಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸಿ ಮತ್ತು ಅಶುದ್ಧ ಕೈಗಳಿಂದ ಅವನ್ನು ಮುಟ್ಟಬೇಡಿ.

ನೀವು ಎಲ್ಲಾ ಕಡೆ ತೆಗೆದುಕೊಂಡು ಹೋಗುವ ನಿಮ್ಮ ಹ್ಯಾಂಡ್ ಬ್ಯಾಗ್ ಮತ್ತು ಆಗಾಗ ಬಳಸುತ್ತಲೇ ಇರುವ ಪರ್ಸ್‌ಗಳೂ ಕೂಡ, ನಿಮ್ಮ ಆರೋಗ್ಯ ಕೆಡಿಸುವಂಥ ಕೀಟಾಣುಗಳನ್ನು ಹೊಂದಿರಬಹುದು. ಹೀಗಾಗಿ, ನಿಮ್ಮ ಬ್ಯಾಗಿನಲ್ಲಿರುವ ಬಸ್ಸು, ರೈಲಿನ ಹಳೆ ಟಿಕೆಟ್‌ಗಳನ್ನು ಬಿಸಾಕಿ, ಏನನ್ನಾದರೂ ಕೊಂಡಿದ್ದರ ರಸೀದಿಗಳಿದ್ದರೆ ಅವನ್ನು ಬೇರೆ ಕಡೆ ಎತ್ತಿಡಿ. ಅನಗತ್ಯ ವಸ್ತುಗಳನ್ನು ಬ್ಯಾಗಿನಿಂದ ತೆಗೆಯಿರಿ, ಆಗಾಗ ಬ್ಯಾಗ್ ಅನ್ನು ಕ್ಲೀನ್ ಮಾಡಿ. ಪರ್ಸ್‌ನಲ್ಲಿ ತೀರಾ ಅಗತ್ಯವಿರುವ ಕಾರ್ಡ್, ಕ್ಯಾಷ್ ಮತ್ತು ಡಿಎಲ್ ನಂಥವನ್ನು ಮಾತ್ರ ಇಟ್ಟುಕೊಳ್ಳಿ.

ಕೊನೆಯದಾಗಿ, ನೀವು ಪಾತ್ರೆ ತೊಳೆಯಲು, ಬಚ್ಚಲು ಮನೆಯ ಸೆರಾಮಿಕ್ ಗೋಡೆ ಉಜ್ಜಲು ಸ್ಪಾಂಜ್ ಬಳಸುತ್ತೀರಿ ತಾನೆ. ಈ ಸ್ಪಾಂಜ್ ಗಳು ನಿಮ್ಮ ಮನೆಯನ್ನು ಕ್ಲೀನ್ ಮಾಡುವಲ್ಲಿ ನೆರವಾಗುತ್ತವೆ, ಆದರೆ, ಇವುಗಳನ್ನು ಸರಿಯಾಗಿ ತೊಳೆದು ಇರಿಸದಿದ್ದರೆ, ಇವುಗಳೇ ಕೀಟಾಣುಗಳ ಉತ್ಪತ್ತಿ ತಾಣಗಳಾಗಿ ಬದಲಾಗುತ್ತವೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಅಥವ ತಿಂಗಳಿಗೊಮ್ಮೆಯಾದರೂ ಈ ಸ್ಪಾಂಜ್‌ ಗಳನ್ನು ಬಿಸಾಕಿ ಹೊಸ ಸ್ಪಾಂಜ್ ಗಳನ್ನು ಬಳಸಿ, ಇದರ ಜೊತೆಗೆ ಆಗಾಗ ಬಿಸಿ ನೀರು ಮತ್ತು ಪಾತ್ರೆ ತೊಳೆಯುವ ಸೋಪ್ ಬಳಸಿ ಇವನ್ನು ತೊಳೆದು ನೀರಿಲ್ಲದಂತೆ ಹಿಂಡಿ ಇಟ್ಟುಕೊಳ್ಳಿ.  ಇಷ್ಟು ಮಾತ್ರವಲ್ಲ, ಈ ರೀತಿ, ಇನ್ನೂ ಯಾವುದಾದರೂ, ನಿಮಗೆ ಅರಿವೇ ಇಲ್ಲದಂತೆ ಮಾಡುತ್ತಿರುವ ದುರಭ್ಯಾಸಗಳನ್ನು ಪತ್ತೆ ಹಚ್ಚಿ, ಅವುಗಳನ್ನು ನಿಲ್ಲಿಸಿ. ಪದೇ ಪದೇ ಅನಾರೋಗ್ಯಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಿ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ