ಕನ್ನಡಕ್ಕೊಂದು ಬಾವುಟ ಇರಲೇಬೇಕು: ಸಿಎಂ

Kannada News

14-10-2017

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ರಕ್ಷಣಾ ವೇದಿಕೆ ಆಯೋಜಿಸಿದ್ದ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಉದ್ಘಾಟಿಸಿದರು. ಇನ್ನು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡದ ನೆಲ,ಜಲ,ಭಾಷೆಯ ಉಳಿವಿಗೆ ಶ್ರಮಿಸುತ್ತಿರುವ ಎಲ್ಲರಿಗೂ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಅವರು ಯಾವುದೇ ಭಾಷಿಕರಾಗಿರಲಿ, ಕರ್ನಾಟಕದಲ್ಲಿ ವಾಸ ಮಾಡುವವರು ಮೊದಲು ಕನ್ನಡಿಗರು, ಪ್ರತಿಯೊಬ್ಬರೂ ಕನ್ನಡಿಗರಾಗಲೇಬೇಕು ಎಂದರು.

ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಪರ ಭಾಷಿಕರು ಕನ್ನಡಿಗರಾಗಲೇಬೇಕು. ಇದರಲ್ಲಿ ಯಾವುದೇ ರಾಜೀ ಇಲ್ಲ, ನಮ್ಮ ಸರ್ಕಾರ ಕನ್ನಡದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ರಕ್ಷಣೆಗೆ ಬದ್ಧವಾಗಿದೆ. ಈ ನಾಡಿನ ಮುಖ್ಯಮಂತ್ರಿಯಾಗಿ, ಆರೂವರೆ ಕೋಟಿ ಜನರ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ, ಕನ್ನಡಕ್ಕೊಂದು ಬಾವುಟ ಇರಲೇಬೇಕು ಎಂದರು.

ಪ್ರತ್ಯೇಕ ಬಾವುಟ ಇರುವಂತಿಲ್ಲ ಎಂದು ಸಂವಿಧಾನದಲ್ಲಿ ಹೇಳಿಲ್ಲ. ರಾಷ್ಟ್ರಧ್ವಜದ ಮೇಲಿನ ಗೌರವ ಸಹ ಕಡಿಮೆ ಆಗುವುದಿಲ್ಲ. ರಾಷ್ಟ್ರ‌ಧ್ವಜ ಎಂದೆಂದೂ ಮೇಲೆಯೇ ಹಾರುತ್ತದೆ ಎಂದ ಅವರು, ನಮ್ಮ ಮೆಟ್ರೋ ರೈಲಿನಲ್ಲಿ ಹಿಂದಿ ಬಳಕೆ ಸಾಧ್ಯವಿಲ್ಲ ಎಂದು, ಕೇಂದ್ರ ಸರ್ಕಾರಕ್ಕೆ ಖಡಾಖಂಡಿತವಾಗಿ ಪತ್ರ ಬರೆದು ತಿಳಿಸಿದ್ದೇನೆ. ತಮಿಳುನಾಡು, ಕೇರಳದ ಮೆಟ್ರೋ ರೈಲಿನಲ್ಲಿ ಇಲ್ಲದ ಹಿಂದಿ ಇಲ್ಲೇಕೆ ಬೇಕು ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

ಇನ್ನು ಕೃಷ್ಣಾ, ಕಾವೇರಿ, ಮಹಾದಾಯಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಆದರೆ, ನ್ಯಾಯಕ್ಕಾಗಿ ನಮ್ಮ ಸರ್ಕಾರ ಹೋರಾಡುತ್ತದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಎಲ್ಲೇ ಇರು, ಎಂತಾದರೂ ಇರು, ಮೊದಲು ಕನ್ನಡಿಗನಾಗಿರು ಎಂಬ ರಾಷ್ಟ್ರಕವಿ ಕುವೆಂಪು ಅವರ ಮಂತ್ರವನ್ನು ಸದಾ ಜಪಿಸುವ ವಾತಾವರಣ ನಿರ್ಮಾಣ ಆಗಬೇಕು.‌

ಕನ್ನಡಕ್ಕಾಗಿ ಹೋರಾಟ ಮಾಡಿರುವ ಕನ್ನಡಿಗರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಸರ್ಕಾರ ವಾಪಸ್ ಪಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ