ಬೆಂಗಳೂರು ಟು ಆಲೆಪ್ಪಿ ಅಂಡ್ ಶ್ರೀಹರಿಕೋಟ

Kannada News

14-10-2017

ಬೆಂಗಳೂರು: ಕೇರಳದ ಆಲೆಪ್ಪಿಗೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ, ನೂತನ ಡೈಮಂಡ್ ಕ್ಲಾಸ್ ಶ್ರೇಣಿಯ ಐಶಾರಾಮಿ ಬಸ್ ಸೇವೆ ಆರಂಭಿಸಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾಗೆ ಹೆಚ್ಚುವರಿ ಸೇವೆ ನೀಡಲಿದೆ.

ಶಾಂತಿನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಲ್ಲಿ ನೂತನ ಅಂತರಾಜ್ಯ ಮಾರ್ಗ ಹಾಗು ಹೆಚ್ಚುವರಿ ಬಸ್ ಸೇವೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗು ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಹಸಿರು ನಿಶಾನೆ ತೋರಿದರು.

ಬೆಂಗಳೂರಿನಿಂದ ಕೇರಳದ ಪ್ರಮುಖ ಪ್ರವಾಸೀ ತಾಣ ಆಲೆಪ್ಪಿಗೆ ಪ್ರತಿದಿನ ಸಂಜೆ 07.45 ನಿಮಿಷಕ್ಕೆ ಹೊರಡಲಿರುವ ಕೆ.ಎಸ್.ಆರ್.ಟಿ.ಸಿ ಡೈಮಂಡ್‌ ಕ್ಲಾಸ್ ಸ್ಕ್ಯಾನಿಯಾ ಬಸ್ ಮರುದಿನ ಬೆಳಿಗ್ಗೆ 07 ಗಂಟೆಗೆ ಆಲೆಪ್ಪಿ ತಲುಪಲಿದೆ. ಆಲೆಪ್ಪಿಯಿಂದ ಪ್ರತಿದಿನ ಸಂಜೆ 07 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 06.30 ಕ್ಕೆ ಬೆಂಗಳೂರು ತಲುಪಲಿದ್ದು 1205 ರೂ.ಗಳ ಪ್ರಯಾಣದರ ನಿಗದಿಪಡಿಸಲಾಗಿದೆ.

ಅದೇ ರೀತಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾಗೆ ಈವರೆಗೆ ಕೇವಲ ಇದ್ದ ರಾತ್ರಿ ಬಸ್ ಸೇವೆಯನ್ನು ಹಗಲಿಗೂ ವಿಸ್ತರಣೆ ಮಾಡಲಾಗಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 5.15 ಕ್ಕೆ ಶ್ರೀಹರಿಕೋಟಾಗೆ ತಲುಪಲಿದೆ. ರಾತ್ರಿ 8.30 ಕ್ಕೆ ಶ್ರೀಹರಿಕೋಟಾದಿಂದ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಬೆಂಗಳೂರು ತಲುಪಲಿದ್ದು ಹಗಲು ವೇಳೆ ಪ್ರಯಾಣ ದರ 684 ರೂ.ಹಾಗು ರಾತ್ರಿ ವೇಳೆ ಪ್ರಯಾಣಕ್ಕೆ 790 ರೂ.ಗಳ ಪ್ರಯಾಣ ದರ ನಿಗದಿಪಡಿಸಿದೆ.

ನೂತನ ಸೇವೆ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ,ಕೆಲ ತಿಂಗಳಿಂದ ಆಲೆಪ್ಪಿಗೆ ಅಂತಾರಾಜ್ಯ ಸೇವೆಗೆ ಪ್ರಯತ್ನ ನಡೆಸಿದ್ದು, ಅಂತಿಮವಾಗಿ ಆಲೆಪ್ಪಿಯಲ್ಲಿಯೇ ನೂತನ ಸೇವೆಗೆ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಗಳು ಒಡಂಬಡಿಕೆಗೆ ಸಹಿಹಾಕಿದ್ದವು. ಕಾಕತಾಳೀಯ ಎನ್ನುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೂಡ ಆಲೆಪ್ಪಿಯವರು. ಹಾಗಾಗಿ ಅವರನ್ನು ಕರೆಸಿ, ಅಂತಾರಾಜ್ಯ ಮಾರ್ಗದ ಬಸ್ ಸೇವೆಗೆ ಚಾಲನೆ ಕೊಡಿಸಲಾಯಿತು ಎಂದರು.

ಪ್ರತಿಹಬ್ಬದಂತೆ ದೀಪಾವಳಿಗೂ ಕೆ.ಎಸ್.ಆರ್.ಟಿ.ಸಿ ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸಿದೆ. ವಿಶೇಷ ಸೇವೆ ನೀಡುವ ಬಸ್ ಮರಳಿ ಬರುವಾಗಿ ಖಾಲಿ ಬರಬೇಕು. ಹಾಗಾಗಿ ಅಲ್ಪ ಪ್ರಮಾಣದ ದರ ಹೆಚ್ಚಳ ಮಾಡುತ್ತೇವೆ, ಆದರೆ ಖಾಸಗಿಯವರು ದುಪ್ಪಟ್ಟಿಗೂ ಅಧಿಕ ಹಣ ಪಡೆಯುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸುತ್ತೇವೆ. ಆದರೆ ಪ್ರಯಾಣಿಕರು ಹೆಚ್ಚು ಹೆಚ್ಚು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲೇ ಪ್ರಯಾಣಿಸಿ, ಖಾಸಗಿಯವರಿಗೆ‌ ಹೆಚ್ಚು ಹಣ ನೀಡುವುದನ್ನು ತಪ್ಪಿಸಿ ಎಂದು ಸಾರಿಗೆ ಸಚಿವರು ಕರೆ ನೀಡಿದರು.

ಅದಲ್ಲದೇ ಬಿಎಂಟಿಸಿಗೆ ಹೊಸದಾಗಿ 3000 ಬಸ್ ಸೇರ್ಪಡೆ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ 1500 ಬಸ್ ಅನ್ನು ನಿಗಮ ಖರೀದಿಸಲಿದ್ದು, ಇನ್ನುಳಿದ 1500 ಬಸ್ ಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ