ಹುಷಾರ್ ಮಹಾ ಮಳೆ ಮುಗಿದಿಲ್ಲ..!

Kannada News

14-10-2017

ಬೆಂಗಳೂರು: ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು, ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಭಾನುವಾರದವರೆಗೂ ಸಿಡಿಲು-ಗುಡುಗು ಸಹಿತ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ 2 ಕಡೆ ಹಾಗೂ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದಲ್ಲಿ ಮೂರ್ನಾಲ್ಕು ದಿನದಿನದಿಂದ ಭಾರೀ ಮಳೆಯಾಗುತ್ತಿದ್ದು ಎಚ್ಚರಿಕೆ ನೀಡಿದ್ದಾರೆ.

ಇನ್ನು ನಗರದಲ್ಲಿ ನಿನ್ನೆ ಸುರಿದ ಮಹಾ ಮಳೆಯಿಂದಾಗಿ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರ ಕುಟುಂಬಕ್ಕೆ ಮೇಯರ್ ಸಂಪತ್‌ ರಾಜ್ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮಹಾ ಮಳೆಯಲ್ಲಿ ಕುರುಬರಹಳ್ಳಿಯ ಲಗ್ಗೆರೆಯಲ್ಲಿ ತಾಯಿ ನಿಂಗಮ್ಮ, ಪುತ್ರಿ ಪುಷ್ಪಾ ಮತ್ತು ಕುರುಬರಹಳ್ಳಿಯಲ್ಲಿ ಮನೆಯೊಂದು ಕುಸಿದು ಬಿದ್ದ ಪರಿಣಾಮ ದಂಪತಿ ಶಂಕರಪ್ಪ ಮತ್ತು ಕಮಲಮ್ಮ ಮೃತಪಟ್ಟಿದ್ದಾರೆ. ಇನ್ನು ಕಾಣೆಯಾದವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ. ಸದ್ಯ ಮೇಯರ್‌ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಮೃತ ದೇಹಗಳ ಹುಡುಕಾಟ ನಡೆಯುತ್ತಿದೆ. 

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಮಳೆಯಿಂದಾಗಿ ಉಂಟಾದ ಹಾನಿ ಪ್ರದೇಶಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ವಿಜಯ್‌ ಶಂಕರ್‌ ಮತ್ತಿತರರು ಕೂಡ ಭೇಟಿ ನೀಡಿದ್ದಾರೆ.

ಅದಲ್ಲದೇ ಎರಡನೇ ಶನಿವಾರದ ರಜೆಯನ್ನು ಮೇಯರ್‌ ರದ್ದುಪಡಿಸಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಭೇಟಿ ಹಾಗೂ ಪರಿಹಾರ ಕಾರ್ಯದಲ್ಲಿ ಪಾಲಿಕೆ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಳ್ಳಬೇಕೆಂದು, ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಲಾಗಿದ್ದು, ಕೆಲಸಕ್ಕೆ ಹಾಜರಾಗುವಂತೆ ಮೇಯರ್‌ ಸಂಪತ್‌ ರಾಜ್‌ ಸೂಚಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ