ಬಿಎಂಟಿಸಿ, ಮೆಟ್ರೊ ಜೊತೆಗೆ ಬೋಟ್ ಸರ್ವೀಸ್…?

13-10-2017
ಬೆಂಗಳೂರು: ಹೆಚ್ಚು ಕಮ್ಮಿ ಕಳೆದ ಎರಡು ತಿಂಗಳಿನಿಂದಲೂ ಬೆಂಗಳೂರಿನಲ್ಲಿ ಯಾವ ಪಾಟಿ ಮಳೆ ಬರುತ್ತಿದೆ ಎಂದರೆ, ನಮ್ಮ ಬೆಂಗಳೂರನ್ನು ಹೊಸ ಆಗುಂಬೆಯೆಂದೋ ಚಿರಾಪುಂಜಿಯೆಂದೋ ಕರೆಯುವುದೇ ಸರಿ ಅನ್ನಬಹುದು.
ಬೆಳಗ್ಗೆ ಮಳೆ, ಮಧ್ಯಾಹ್ನ ಮಳೆ, ಸಂಜೆ ಆರಂಭವಾದರೆ ಬೆಳಗಿನ ಜಾವದವರೆಗೂ ಮಳೆ. ಮಳೆ ಬೀಳದೇ ಇರುವ ದಿನವೇ ಇಲ್ಲವೆಂದು ಹೇಳಬೇಕು. ನಗರದ ರಸ್ತೆಗಳು, ಜನ ಮತ್ತು ವಾಹನಗಳ ಬದಲು ನೀರನ್ನು ಕೊಂಡೊಯ್ಯುವ ನದಿಗಳಂತೆ ಬದಲಾಗಿವೆ. ಕೆಲವರಂತೂ, ಕರ್ನಾಟಕದವರು ಹೊಸೂರು ರಸ್ತೆ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ ಎಂಬಂಥ ಜೋಕುಗಳನ್ನೂ ಸೃಷ್ಟಿಸಿಬಿಟ್ಟಿದ್ದಾರೆ.
ಬೆಂಗಳೂರು ನಗರ ಸಮುದ್ರ ಮಟ್ಟದಿಂದ 3 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದು ಯಾವ ಸಮುದ್ರದ ಎಂಥ ಸುನಾಮಿಯೂ ಈ ನಗರಕ್ಕೆ ನುಗ್ಗಲು ಸಾಧ್ಯವಿಲ್ಲ, ಆದರೆ, ನಗರದಲ್ಲಿ ಸಾಕಷ್ಟು ತಗ್ಗು ಪ್ರದೇಶಗಳಿದ್ದು ಅಲ್ಲಿನ ಜನ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಈ ಮಳೆಗಾಲದಲ್ಲಿ ಕೋರಮಂಗಲ ಪ್ರದೇಶದ ನಿವಾಸಿಗಳು, ಸಾಕು ಸಾಕು ಅನ್ನುವಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಡಾವಣೆಯ ಮನೆಗಳ ಸುತ್ತ ಸಾಕಷ್ಟು ದೂರದವರೆಗೂ ಆಳೆತ್ತರದ ನೀರು ನಿಂತಿದ್ದು, ಇಲ್ಲಿನ ಜನರು ಮನೆಗೆ ಬರುವುದಾಗಲಿ, ಮತ್ತೆ ಹೊರಗೆ ಹೋಗುವುದಾಗಲಿ ಅತ್ಯಂತ ಯಾತನೆಯ ಕೆಲಸ ಆಗಿಬಿಟ್ಟಿದೆ.
ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಯೋಚಿಸಿದ ಕೋರಮಂಗಲ ನಾಲ್ಕನೇ ಬ್ಲಾಕ್ ನಿವಾಸಿ ಶಾಲಿನಿ ಮೋದಿ ಅನ್ನುವವರು, ಮೂರು ಜನರು ಕುಳಿತು ಪ್ರಯಾಣಿಸಬಹುದಾದ ಹಾಯಿ ದೋಣಿ ಖರೀದಿಸಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಶಾಲಿನಿ, ತಾವು ಆಸ್ಪತ್ರೆಗೆ ಹೋಗುವುದಕ್ಕೆ, ಮಕ್ಕಳು ಶಾಲೆಗೆ ಹೋಗುವುದಕ್ಕೆ ಆಗುತ್ತಿದ್ದ ಅನಾನುಕೂಲ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿಕೊಂಡಿದ್ದಾರೆ.
ಶಾಲಿನಿ ಅವರ ದೋಣಿ, ಈ ಬಡಾವಣೆಯ ಇತರೆ ಹಿರಿಯ ನಾಗರಿಕರಿಗೆ, ಶಾಲೆಗೆ ಹೋಗುವ ಮಕ್ಕಳಿಗೂ ನೆರವಾಗುತ್ತಿದೆ. ಈ ಮಳೆಗಾಲದ ನಂತರವಾದರೂ, ಬೆಂಗಳೂರಿನ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡೊಳ್ಳಬೇಕು, ಇಲ್ಲದಿದ್ದರೆ ಮುಂದಿನ ಮಳೆಗಾಲದಲ್ಲಿ ಬಿಎಂಟಿಸಿ, ನಮ್ಮ ಮೆಟ್ರೊ ಜೊತೆಗೆ ದೋಣಿ ಸಂಚಾರ ಸಾರಿಗೆಯನ್ನೂ ಜಾರಿಗೆ ತರಬೇಕಾಗಿಬರಬಹುದು.
ಒಂದು ಕಮೆಂಟನ್ನು ಹಾಕಿ