‘ಚಾಮುಂಡೇಶ್ವರಿ’ಯಲ್ಲಿ ಹೊಸ ಲೆಕ್ಕಾಚಾರ…

Kannada News

13-10-2017 737

ಕೆಲವರ್ಷಗಳ ಹಿಂದೆ ಜನತಾ ದಳದಿಂದ ಹೊರಬಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪಚುನಾವಣೆ ಗೆದ್ದಿದ್ದು ಕೇವಲ 127 ಮತಗಳ ಅಂತರದಿಂದ. ಅಷ್ಟರಮಟ್ಟಿಗೆ ಅವರಿಗೆ ಏಳು ಕೆರೆ ನೀರು ಕುಡಿಸುವಂತೆ ಮಾಡುವಲ್ಲಿ ಬಿಜೆಪಿ-ದಳದ ಪಾತ್ರ ಮುಖ್ಯವಾಗಿತ್ತು. ಈಗ ಮತ್ತದೇ ಸ್ಥಿತಿ ಎದುರಾಗಿದ್ದು, ಇದೇ ಕ್ಷೇತ್ರದಲ್ಲಿ ಅವೇ ಪಕ್ಷಗಳು ಸಿದ್ದುವನ್ನು ಸೋಲಿಸಲು ಪಣತೊಟ್ಟು ನಿಂತಿವೆ.

ಆಗ ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್, ಸಿದ್ದು ಜೊತೆಗಿದ್ದರು. ಈಗ ಇವರಿಬ್ಬರೂ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವುದು, ಕದನ ಕುತೂಹಲವನ್ನು ಹೆಚ್ಚಿಸಿದೆ. ಬಿಜೆಪಿಯಿಂದ ನಾಮಕಾವಸ್ತೆ ಅಭ್ಯರ್ಥಿ ನಿಲ್ಲಿಸಿ, ಜೆಡಿಎಸ್ ಅಭ್ಯರ್ಥಿಗೆ ಪರೋಕ್ಷ ಬೆಂಬಲ ನೀಡುವ ತಂತ್ರ ರೂಪಿಸಲಾಗಿದೆ.

ಶ್ರೀನಿವಾಸ್ ಪ್ರಸಾದ್ ಕಡೆಯಿಂದ ಒಂದಷ್ಟು ದಲಿತ ಮತ, ವಿಶ್ವನಾಥ್ ರಿಂದ ಕುರುಬ ಮತಗಳ ಜೊತೆಗೆ, ಒಕ್ಕಲಿಗ ಮತ್ತು ನಾಯಕ ಸಮುದಾಯದ ಮತಗಳು ಜಿ.ಟಿ.ದೇವೇಗೌಡರಿಗೆ ಬಿದ್ದರೆ ಮತ್ತು ಬಿಜೆಪಿ ಅಭ್ಯರ್ಥಿ ಲಿಂಗಾಯತ ಮತಗಳನ್ನು ಕಸಿದರೆ, ಸಿದ್ದು ಮಣಿಸುವುದು ಸುಲಭ ಎಂಬ ಲೆಕ್ಕಾಚಾರಗಳು ಈಗಾಗಲೇ ಚಾಲ್ತಿಗೆ ಬಂದಿದ್ದು, ಮತಬೇಟೆ ಆರಂಭಗೊಂಡಿದೆ.

ಇದೇ ವಿಚಾರದಲ್ಲಿ ಶ್ರೀನಿವಾಸ ಪ್ರಸಾದ್ ಮತ್ತು ಹೆಚ್.ಸಿ.ಮಹದೇವಪ್ಪ ಇವರಿಬ್ಬರಲ್ಲಿ, ಯಾರು ದಲಿತ ಜನಾಂಗದ ಪ್ರಭಾವೀ ಮುಖಂಡರು ಎಂಬುದೂ ಕೂಡ ಬಯಲಿಗೆ ಬರಲಿದೆ. ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಿಂದ ಶ್ರೀನಿವಾಸ ಪ್ರಸಾದ್ರನ್ನು ಸೋಲಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈಗ ಶ್ರೀನಿವಾಸ ಪ್ರಸಾದ್ ಬೆಂಬಲ ಪಡೆದಿರುವ ಜೆಡಿಎಸ್ ಅಭ್ಯರ್ಥಿಯನ್ನು ಸಿದ್ದರಾಮಯ್ಯನವರು ಎದುರಿಸುವಂತಾಗಿರುವುದೇ ವಿಶೇಷ.

ವರದಿ: ಜಿ.ಆರ್.ಸತ್ಯಲಿಂಗರಾಜು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ