ಕನ್ಹಯ್ಯ ವಿರುದ್ಧ ಶಿಸ್ತು ಕ್ರಮ ರದ್ದು…

Kannada News

13-10-2017

ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿದಂತೆ 15 ವಿದ್ಯಾರ್ಥಿಗಳ ವಿರುದ್ಧ, ವಿವಿ ಶಿಸ್ತು ಸಮಿತಿ ಕೈಗೊಂಡಿದ್ದ ಕ್ರಮವನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ.

ಕಳೆದ ವರ್ಷ ಜೆಎನ್‌ಯುವಿನಲ್ಲಿ,  ಸಂಸತ್‌ ಮೇಲಿನ ಭಯೋತ್ಪಾದಕರ ದಾಳಿ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದರ ಮೂರನೇ ವರ್ಷದ ಆಚರಣೆ ಹಿನ್ನೆಲೆ ‘ಎ ಕಂಟ್ರಿ ವಿತೌಟ್ ಎ ಪೋಸ್ಚ್ ಆಫೀಸ್’ ಎಂಬ ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಈ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್, ಭಾರತವನ್ನು ಹಾಳುಮಾಡುವವರೆಗೂ ಹೋರಾಡುತ್ತೇವೆ’, ಇತ್ಯಾದಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಲಾಗಿತ್ತು.

ಈ ವಿಚಾರ ದೇಶಾದ್ಯಂತ ಸುದ್ದಿಯಾಗಿ, ಕೋಲಾಹಲ ಉಂಟಾಗಿತ್ತು. ಬಿಜೆಪಿಯ ಸಂಸದ ಮಹೇಶ್  ಗಿರಿ ಈ ಬಗ್ಗೆ ದೂರು ದಾಖಲಿಸಿದ್ದರು. ಆ ನಂತರ, ಕನ್ಹಯ್ಯ ಕುಮಾರ್, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಷೀದ್, ಎಡರಂಗದ ಸಂಸದ ಡಿ.ರಾಜ ಅವರ ಪುತ್ರಿ ಅಪರಾಜಿತ, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿ ಹಲವು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕನ್ಹಯ್ಯ ಕುಮಾರ್ ಮತ್ತಿತರರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶ್ವವಿದ್ಯಾಲಯ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಈ  ಸಮಿತಿಯವರು 15 ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ, ಅವರಿಗೆ ದಂಡ ಮತ್ತು ನಿಷೇಧ ಹೇರಿದ್ದರು.

ಇದೀಗ, ಈ ಶಿಸ್ತು ಕ್ರಮವನ್ನು ರದ್ದು ಪಡಿಸಿರುವ ದೆಹಲಿ ಹೈಕೋರ್ಟ್, ಮತ್ತೊಮ್ಮೆ ಈ ವಿಚಾರವನ್ನು ಪರೀಶೀಲಿಸಿ, ವಿದ್ಯಾರ್ಥಿಗಳ ವಿವರಣೆ ಕೇಳಿ, ವಿವೇಚನಾಪೂರ್ಣ ತೀರ್ಮಾನ ಕೈಗೊಳ್ಳಿ ಎಂದು ಜೆಎನ್‌ಯು ಉಪ ಕುಲಪತಿ ಎಂ.ಜಗದೇಶ್ ಕುಮಾರ್ ಅವರಿಗೆ ಸೂಚಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ