ಮಳೆಗೆ ತುಂಬಿ ಹರಿದ ಕೆರೆ-ಕಟ್ಟೆಗಳು !

Kannada News

13-10-2017

ಬೆಂಗಳೂರು: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ ದಶಕಗಳಿಂದ ಮಳೆಯಾಗದ ಕಾರಣ ಬತ್ತಿ ಬರಿದಾಗಿದ್ದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದೆ.

ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರಗಿ, ಹುಬ್ಬಳ್ಳಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಬಳ್ಳಾರಿ ಶ್ರೀಕೃಷ್ಣದೇವ ರಾಯ ವಿವಿ ಜಲದಿಗ್ಬಂಧನ ಒಳಗಾಗಿದೆ.

ಚಿತ್ರದುರ್ಗದ ಐತಿಹಾಸಿಕ ಸಂತೆಹೊಂಡ, ಮಲ್ಲಾಪುರ ಕೆರೆ ದಶಕಗಳ ಬಳಿಕ ಕೋಡಿಬಿದ್ದಿವೆ. ಸಿಹಿನೀರು ಹೊಂಡ, ಚನ್ನಕೇಶ್ವರ ಹೊಂಡ, ಕೆಂಚಮಲ್ಲಪ್ಪನ ಹೊಂಡಗಳು ವಾರದಲ್ಲಿ 2ನೇ ಬಾರಿ ತುಂಬಿ ಹರಿದಿವೆ. ಹೊಸದುರ್ಗ ತಾಲ್ಲೂಕು ಗುಡ್ಡದ ನೇರಲಕೆರೆಯ ದಶರಥ ವಜ್ರದಲ್ಲಿ ಬೆಟ್ಟದಿಂದ ನೀರು ಧುಮ್ಮುಕ್ಕಿತ್ತಿದ್ದು ಜಲಪಾತ ಸೃಷ್ಟಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ  ನೆನ್ನೆ ಬೆಳಗಿನವರೆಗೆ 30.3 ಮಿ.ಮೀ. ಮಳೆಯಾಗಿದ್ದು, 98 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಕುಷ್ಟಗಿ ತಾಲ್ಲೂಕಿನ ಹನುಮನಾಳ, ಪಟ್ಟಲಚಿಂತಿ ಸೇರಿ ಇತರ ಗ್ರಾಮಗಳಲ್ಲಿ ಸಜ್ಜೆ, ಜೋಳ, ಎಳ್ಳು, ತೊಗರಿ ಸೇರಿ ನೂರಾರು ಎಕರೆ ಬೆಳೆ ನೆಲಕ್ಕುರುಳಿದೆ. ಹಳ್ಳ, ನಾಲೆಗಳು ತುಂಬಿ ಹರಿದಿವೆ. ಹಿರೆಹಳ್ಳ ಜಲಾಶಯ ತುಂಬಿ ಹರಿದಿದೆ.

ಯಾದಗಿರಿ ಜಿಲ್ಲೆ ಡೋಣಿ ನದಿಗೆ ಪ್ರವಾಹ ಉಂಟಾಗಿದ್ದು, ಸಮೀಪದ ಹೊರಹಟ್ಟಿ, ಬಪ್ಪರಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಕ್ಕೆ ನೀರು ಒದಗಿಸುವ ಜಕ್ಕಲಮಡಗು ಜಲಾಶಯ ಭರ್ತಿಯಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಜಲಾಶಯ ತುಂಬಿದ್ದು, ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ 92 ಕೆರೆಗಳು ಕೋಡಿಯಾಗಿವೆ. ಕೋಲಾರ ಜಿಲ್ಲೆಯ 425ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ತುಮಕೂರು ಜಿಲ್ಲೆಯ ಸುವರ್ಣಮುಖಿ, ಪಿನಾಕಿನಿ, ಜಯಮಂಗಲಿ ನದಿಗಳು ಮೈದುಂಬಿವೆ. ಪುರವರ ಹೋಬಳಿಯಲ್ಲಿ ಹರಿಯುವ ಜಯಮಂಗಲಿ 12 ವರ್ಷಗಳ ನಂತರ ತುಂಬಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ