ಮಾಜಿ ಮೇಯರ್ ಬಿಜೆಪಿಗೆ ಗುಡ್ ಬೈ..?

Kannada News

12-10-2017

ಬೆಂಗಳೂರು: ಮಾಜಿ ಮೇಯರ್ ಶಾಂತಕುಮಾರಿ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕ ಎಚ್.ರವೀಂದ್ರ ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪುರಪಿತೃಗಳು ಬಿಬಿಎಂಪಿಯಿಂದ ವಿಧಾನಸೌಧದ ಮೆಟ್ಟಿಲೇರಲು ತವಕಿಸುತ್ತಿದ್ದಾರೆ. ಶಾಂತಕುಮಾರಿ ಹಾಗೂ ರವೀಂದ್ರ ಅವರು ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈ ಇಬ್ಬರು ಮುಖಂಡರಿಗೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ಗಾಡ್‍ ಫಾದರ್ ಗಳು. ಈ ಇಬ್ಬರ ನೆರವಿನಿಂದ ವಿಧಾನಸಭಾ ಟಿಕೆಟ್ ಪಡೆಯಲು ತೀರ್ಮಾನಿಸಿದ್ದರು.

ಆದರೆ, ಗೋವಿಂದರಾಜನಗರದಿಂದ ಬಿಬಿಎಂಪಿ ಸದಸ್ಯ ಕೆ.ಉಮೇಶ್‍ ಶೆಟ್ಟಿ ಇಲ್ಲವೇ ಸ್ವತಃ ವಿ.ಸೋಮಣ್ಣ ಅವರೇ ಸ್ಪರ್ಧಿಸುವ ಸಾಧ್ಯತೆಗಳಿವೆ. ಅದೇ ರೀತಿ ವಿಜಯನಗರದಿಂದ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅಥವಾ ಮಾಜಿ ಉಪ ಮೇಯರ್ ಎಂ.ಲಕ್ಷ್ಮೀನಾರಾಯಣ್ ಅವರಿಗೆ ಟಿಕೆಟ್ ದೊರೆಯುವ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ, ಶಾಂತಕುಮಾರಿ ಮತ್ತು ರವೀಂದ್ರ ಅವರು ಬಿಜೆಪಿಗೆ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಇಬ್ಬರು ಮುಖಂಡರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಸುತ್ತಿನ ಮಾತುಕತೆ ಮುಗಿದ ನಂತರ ಈ ಇಬ್ಬರಿಗೂ ಕ್ರಮವಾಗಿ ಗೋವಿಂದರಾಜನಗರ ಮತ್ತು ವಿಜಯನಗರದಿಂದ ಜೆಡಿಎಸ್ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ ಎಂದು ಹೇಳಲಾಗುತ್ತಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ