ಸಿಎಂ ಪಟ್ಟ ಗಿಟ್ಟಿಸಿಕೊಳ್ಳಲು ತಂತ್ರ ಪ್ರತಿ ತಂತ್ರ...

Kannada News

12-10-2017

ಕಾಂಗ್ರೆಸ್ ನಲ್ಲೀಗ ಅಧ್ಯಕ್ಷ ಪರಮೇಶ್ವರ್ ವಿರುದ್ಧವೇ ದೂರು ನೀಡುವಂಥ ಸಂದರ್ಭಗಳು ಉದ್ಭವವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ತಂದಿದೆ.

ಗೃಹ ಸಚಿವ ಸ್ಥಾನವನ್ನ ಬಿಟ್ಟು, ಮೂರನೇ ಸಲ ಕೆಪಿಸಿಸಿ ಅಧ್ಯಕ್ಷತೆಯಲ್ಲಿ ಮುಂದುವರಿದಿರುವ ಪರಮೇಶ್ವರ್, ಚುನಾವಣೆಗಳು ಹತ್ತಿರಾಗುತ್ತಿರುವುದರಿಂದ ಪಕ್ಷವನ್ನ ಸಜ್ಜುಗೊಳಿಸುತ್ತಿದ್ದಾರೆ. ತನಗೆ ಸಿಎಂ ಗಾದಿ ಒಲಿಯು ಸಂದರ್ಭ ಬಂದರೆ ಬೆಂಬಲಕ್ಕಿರಲಿ ಎಂಬ ಲೆಕ್ಕದಿಂದಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲೂ ಮುಂದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಪ್ಪತ್ತು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲೂ ನಿರ್ಧರಿಸಿದ್ದಾರೆ. ಇದು ಸ್ಥಾನ ಕಳೆದು ಕೊಳ್ಳುವವರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿಗೆ ಈ ಕುರಿತಂತೆ ದೂರು ಕೊಟ್ಟಿದ್ದಾರೆ.

ತಮ್ಮ ಬೆಂಬಲಿಗರೆ ಅಭ್ಯರ್ಥಿಯಾಗಬೇಕು ಎಂಬುದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೂಡ ಪ್ರಯತ್ನ ಪಡುತ್ತಿದ್ದು, ಇದಕ್ಕೆ ಜಿಲ್ಲಾಧ್ಯಕ್ಷರ ಬೆಂಬಲವೂ ಇರಬೇಕಾಗುತ್ತೆ. ಈಗ ಅಂಥವರನ್ನೆ ಪರಮೇಶ್ವರ್ ಬದಲಾಯಿಸಲು ಹೊರಟಿದ್ದಾರೆಂಬ ಅತೃಪ್ತಿಗಳಿದ್ದು, ಈಗಾಗಲೇ ಈ ಸಲದ ಚುನಾವಣೆ ನಡೆಯೋದು ನನ್ನ ನೇತೃತ್ವದಲ್ಲಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ನವರ ಬಳಿ ದೂರು ಕೊಟ್ಟಿರುವುದು ನಾನಾ ರೀತಿಯ ರಾಜಕೀಯ ಬೆಳವಣಿಗೆಗೆ ಎಡೆಯಾಗಿದೆ.

ಇಂದು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಈ ಕುರಿತಂತೆಯೂ ವರಿಷ್ಟರೊಡನೆ ಚರ್ಚಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ