ಅಶ್ಲೀಲ ವೆಬ್ ಸೈಟ್ ಗೆ ದಂಪತಿ ವಿಡಿಯೋ !

Kannada News

11-10-2017

ಬೆಂಗಳೂರು: ಮನೆ ಬಾಡಿಗೆಗಿದ್ದ ದಂಪತಿಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ ಅಶ್ಲೀಲ ವೆಬ್‍ ಸೈಟ್‍ ಗೆ ಹಾಕಿ ಮನೆ ಮಾಲೀಕನ ಕಿಡಿಗೇಡಿ ಪುತ್ರ ವಿಕೃತಿ ಮರೆದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ನಗರದ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಕೋರಮಂಗಲದ ಮನೆಯೊಂದರಲ್ಲಿ ಬಾಡಿಗೆಗಿದ್ದ ದಂಪತಿ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿದ ಮನೆ ಮಾಲೀಕರ ಪುತ್ರ ಅಂಜನ್ ಎಂಬಾತ, ಅದನ್ನು ಅಶ್ಲೀಲ ವೆಬ್‍ಸೈಟ್‍ ಗೆ ಹಾಕಿದ್ದ.  ಇದನ್ನು ಸ್ನೇಹಿತರೊಬ್ಬರಿಂದ ತಿಳಿದ ದಂಪತಿ ಆಘಾತಗೊಂಡು ಪರಿಶೀಲಿಸಿದಾಗ ಅದು ತಮ್ಮದೇ ವಿಡಿಯೋ ಎಂದು ಸ್ಪಷ್ಟವಾಗಿತ್ತು.

ತಮ್ಮ ಖಾಸಗಿ ದೃಶ್ಯ ಇಂಟರ್‍ ನೆಟ್‍ ಗೆ ಅಪ್ಲೋಡ್ ಆಗಿದ್ದರಿಂದ ಮಹಿಳೆ ಖಿನ್ನತೆಗೊಳಗಾಗಿದ್ದರು. ಇಬ್ಬರೇ ಇರುವ ಮನೆಯಲ್ಲಿ ಬೆಡ್ ರೂಂ ದೃಶ್ಯ ಚಿತ್ರೀಕರಿಸಿದ್ದು ಯಾರು ಎಂಬ ಬಗ್ಗೆ ಯೋಚಿಸಿದಾಗ ಮನೆ ಮಾಲೀಕನ ಮಗನ ಮೇಲೆ ಅನುಮಾನ ಬಂದಿತ್ತು.

ತಮ್ಮ ಬಳಿ ಇದ್ದ ನಕಲಿ ಕೀ ಬಳಸಿ ಅಂಜನ್ ಬೆಡ್ ರೂಂನಲ್ಲಿ ಕ್ಯಾಮರಾ ಇಟ್ಟಿದ್ದ ಎನ್ನಲಾಗಿದೆ. ಹೀಗೆ ಚಿತ್ರೀಕರಿಸಿದ ವಿಡಿಯೋವನ್ನು ಆತ ಇಂಟರ್‍ ನೆಟ್‍ ಗೆ ಅಪ್ಲೋಡ್ ಮಾಡಿದ್ದ. ಅಂಜನ್ ಮೇಲೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ದಂಪತಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದು, ಮನೆ ಮಾಲೀಕನ ಪುತ್ರನೇ ನೀಚ ಕೆಲಸ ಮಾಡಿ ಈಗ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ಖಚಿತವಾಗಿದೆ. ಅಂಜನ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ