ಫಿಲ್ಮ್ ಇನ್ಸ್‌ಟಿಟ್ಯೂಟ್ ಗೆ ಖೇರ್ ಸಾರಥ್ಯ..

Kannada News

11-10-2017

ಪ್ರಸಿದ್ಧ ನಟ ಅನುಪಮ್ ಖೇರ್ ಅವರನ್ನು ಎಫ್‌ಟಿಐಐ ಅಂದರೆ ಪುಣೆಯ ಫಿಲ್ಮ್ ಇನ್ಸ್‌ಟಿಟ್ಯೂಟ್ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನುಪಮ್ ಖೇರ್, ರಂಗಭೂಮಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದಾರೆ. ಬೆಂಡ್ ಇಟ್ ಲೈಕ್ ಬೆಕ್ ಹ್ಯಾಮ್, ಆಂಗ್‌ ಲೀಸ್ ಲಸ್ಟ್‌ ಮತ್ತು 2013ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಸಿಲ್ವರ್ ಲೈನಿಂಗ್ಸ್ ಪ್ಲೇ ಬುಕ್‌ ನಂಥ ಅಂತಾರಾಷ್ಟ್ರೀಯ ಸಿನಿಮಾಗಳಲ್ಲೂ ಅನುಪಮ್ ಖೇರ್ ಪಾತ್ರವಿದೆ.

ಅನುಪಮ್ ಖೇರ್, ಈ ಹಿಂದೆ ಸೆನ್ಸಾರ್ ಮಂಡಳಿ ಮತ್ತು ರಾಷ್ಟ್ರೀಯ ನಾಟಕ ಶಾಲೆ ಮುಖ್ಯಸ್ಥರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಖೇರ್ ಅವರಿಗೆ 2004ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪುರಸ್ಕಾರ ದೊರೆತಿದೆ. ಅನುಪಮ್ ಖೇರ್ ಪತ್ನಿ ಕಿರಣ್ ಖೇರ್ ಕೂಡ ನಟಿ ಹಾಗೂ ರಂಗಭೂಮಿ ಕಲಾವಿದೆಯಾಗಿದ್ದು, ಬಳಿಕ ರಾಜಕೀಯ ಪ್ರವೇಶಿಸಿದ್ದರು. ಇದೀಗ ಚಂಡೀಘಡದ ಸಂಸದೆಯಾಗಿದ್ದಾರೆ.  

ಕಳೆದ ಮಾರ್ಚ್‌ವರೆಗೆ ನಟ ಗಜೇಂದ್ರ ಚೌಹಾಣ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಮುಖ್ಯಸ್ಥರಾಗಿದ್ದರು. ಆದರೆ, ‘ಈ ಸಂಸ್ಥೆಯ ಮುಖ್ಯಸ್ಥರಾಗಲು ಗಜೇಂದ್ರ ಚೌಹಾಣ್ ಅರ್ಹರಲ್ಲ, ಇದು ರಾಜಕೀಯ ಕಾರಣಕ್ಕಾಗಿ ಮಾಡಿರುವ ನೇಮಕ‘ ಎಂದು ಆರೋಪಿಸಿದ್ದ  ಫಿಲ್ಮ್ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿಗಳು, ಸತತ 139 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.

ಪುಣೆ ಫಿಲ್ಮ್ ಇನ್ಸ್‌ಟಿಟ್ಯೂಟ್, ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಶ್ಯಾಮ್ ಬೆನೆಗಲ್, ಅಡೂರ್ ಗೋಪಾಲ ಕೃಷ್ಣನ್, ಮಹೇಶ್ ಭಟ್, ಮೃಣಾಲ್ ಸೇನ್ ಮತ್ತು ಗಿರೀಶ್ ಕಾರ್ನಾಡ್‌ ರಂಥ ಹೆಸರಾಂತ ವ್ಯಕ್ತಿಗಳು ಅದರ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ