ಸಾಹಿತ್ಯ ಸಮ್ಮೇಳನ ಡೌಟಾ...?

Kannada News

11-10-2017

83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನವೆಂಬರ್ ತಿಂಗಳಲ್ಲೇ ನಡೆಯುತ್ತಾ? ಮುಂದಕ್ಕೆ ಹೋಗುತ್ತಾ ಎಂಬುದೇ ಗೊಂದಲಮಯವಾಗಿದೆ.

ಕಳೆದ ವರ್ಷದಿಂದಲೇ ಇಲ್ಲೆ ಸಮ್ಮೇಳನ ಎಂದು ನಿಗದಿಸಿದ್ದರೂ, ಜಿಲ್ಲಾ ಕಸಾಪದ ಹಿಂದಿನ ಅಧಿಕಾರಾವಧಿಯಲ್ಲಿ ಹಣಕಾಸಿನ ಅಪರಾತಪರಾ ಆಗಿದೆ, ಅದನ್ನ ಸರಿಪಡಿಸಿ ತಪ್ಪಿತಸ್ಥರಿಂದ ಹಣ ವಸೂಲಿ ಮಾಡದೆಯೇ ಸಮ್ಮೇಳನ ನಡೆಸಬೇಡಿ ಎಂದು ಒಂದು ಗುಂಪು ಈಗಾಗಲೇ ಸರ್ಕಾರ ಮತ್ತು ಸಂಸ್ಕೃತಿ ಇಲಾಖೆಗೂ ದೂರು ಕೊಟ್ಟಿದೆ.

ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಅಧಿಕಾರ ಮುಗಿಯುವ ಮುನ್ನ ತನ್ನ ತವರು ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲೇಬೇಕು ಎಂಬ ಆಸೆಯನ್ನು ಹೊಂದಿರುವುದರಿಂದ, ಯಾವುದೇ ಅಡೆತಡೆಗಳಾದರೂ ಲೆಕ್ಕಕ್ಕೆ ತೆಗೆದುಕೊಳ್ಳದಂತೆ ಮೌಖಿಕವಾಗಿ ಸೂಚನೆಯನ್ನೂ ಕೊಟ್ಟಿದ್ದಾರೆ.

ಈಗ ತಾನೇ ದಸರಾ ಮುಗಿದಿದ್ದು, ವಸ್ತುಪ್ರದರ್ಶನ ನಡೆಯುತ್ತಿದೆ, ಇದರ ನಡುವೆಯೇ ಸಾಹಿತ್ಯ ಸಮ್ಮೇಳನ ತರಾತುರಿಯಾಗಿ ಮಾಡೋದು ಬೇಡ ಎಂದು ಒಂದು ಗುಂಪು ಪ್ರಬಲವಾಗಿ ವಿರೋಧಿಸುತ್ತಿರುವುದರಲ್ಲಿ ಸತ್ಯವಿರುವಂತೆಯೇ, ಸಮ್ಮೇಳನಕ್ಕೆ ಒಂದೇ ತಿಂಗಳು ಬಾಕಿಯಿದ್ದರೂ ಏನೊಂದೂ ಸಿದ್ಧತೆಗಳಾಗುತ್ತಿರುವ ಕುರುಹುಗಳೂ ಇಲ್ಲಿಲ್ಲ.

 ಚಂಪಾ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿರುವ ಬಗ್ಗೆ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆಯನ್ನೂ ಮಾಡಲಾಗಿದ್ದು, ಆ ರೀತಿ ಮಾಡಬಾರದಿತ್ತು, ಚಂಪಾ ಅಧ್ಯಕ್ಷರಾಗಿದ್ದರಲ್ಲಿ ತಪ್ಪೇನಿದೆ ಎಂದು ಬ್ರಾಹ್ಮಣ ಸಂಘಟನೆಯ ಮುಖ್ಯಸ್ಥರೇ ತಿರುಗಿಬಿದ್ದಿರುವುದರಿಂದ, ಆ ಸಮುದಾಯದಲ್ಲೆ ಬಿರುಕು ಎದ್ದಿದೆ.

ಇತ್ತ ಸಾಹಿತಿಗಳು ಕೂಡ, ಸಮ್ಮೇಳನ ಮುಂದಿನ ತಿಂಗಳು ನಡೆಸುವ ಬಗ್ಗೆ ಪರ ವಿರೋಧವೆಂದಾಗಿದ್ದು, ಯಾವ ಸಿದ್ಧತೆಯೂ ಇಲ್ಲದೆ ಸಮ್ಮೇಳನ ನಡೆಸಲು ಮುಂದಾಗುತ್ತಿರುವುದರ ಹಿಂದೆ, ರಾಜಕೀಯದ ಹಿತಾಸಕ್ತಿಯೇ ಹೆಚ್ಚಾಗಿ ಕಂಡು ಬರುತ್ತಿದೆ ಹೊರತು, ಸಾಹಿತ್ಯದ ಘಮಲು ಇಲ್ಲ ಎನ್ನಲಾಗಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು


ಸಂಬಂಧಿತ ಟ್ಯಾಗ್ಗಳು

ಸಾಹಿತ್ಯ ಸಮ್ಮೇಳನ ಡೌಟಾ...? ಡೌಟಾ...?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ