ನೋಟು ರದ್ದತಿ ಮತ್ತು ನೊಬೆಲ್ ವಿಜೇತ…

Kannada News

10-10-2017

ಈ ವರ್ಷದ ಎಕಾನಮಿಕ್ಸ್ ಅಂದರೆ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಕ ಪ್ರಕಟವಾಗಿದೆ. ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಿಚರ್ಡ್ ಹೆಚ್. ಥೇಲರ್ ಅವರು ನೊಬೆಲ್  ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. 

ಮನುಷ್ಯರಲ್ಲಿನ ವಿಚಾರ ಶಕ್ತಿ ಮತ್ತು ಸ್ವನಿಯಂತ್ರಣದ ಕೊರತೆ, ಮಾರುಕಟ್ಟೆ ಅಥವ ವ್ಯಾಪಾರ ವಹಿವಾಟುಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಥೇಲರ್ ಬೆಳಕು ಚೆಲ್ಲಿದ್ದಾರೆ. 72 ವರ್ಷದ ರಿಚರ್ಡ್ ಥೇಲರ್, 2008ರಲ್ಲಿ ಪ್ರಕಟವಾದ Nudge ಎಂಬ ಜನಪ್ರಿಯ ಪುಸ್ತಕದ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. 

ವಕ್ತಿಯೊಬ್ಬ ಕೈಗೊಳ್ಳುವ ನಿರ್ಧಾರಗಳ ಹಿಂದೆ ಆರ್ಥಿಕತೆ ಮತ್ತು  ಮಾನಸಿಕ ವಿಶ್ಲೇಷಣೆಗಳು ಹೇಗೆ ಪಾತ್ರವಹಿಸುತ್ತವೆ ಅನ್ನುವುದನ್ನು ತಮ್ಮ ಪುಸ್ತಕದಲ್ಲಿ ಕಟ್ಟಿಕೊಟ್ಟಿರುವ ಥೇಲರ್, ಮನಸ್ಸು ಮತ್ತು ಮಾರುಕಟ್ಟೆಗಳ ನಡುವಿನ ಸಂಬಂಧವನ್ನು ವಿವರಿಸಿದ್ದಾರೆ. 

ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು, ಹಳೆಯ ಐದುನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳ ಚಲಾವಣೆ ರದ್ದುಪಡಿಸಿದ್ದ ಕ್ರಮವನ್ನು ರಿಚರ್ಡ್ ಹೆಚ್. ಥೇಲರ್ ಅವರು ಟ್ವಿಟ್ಟರ್ ಸಂದೇಶದ ಮೂಲಕ ಸ್ವಾಗತಿಸಿದ್ದರು. 'ಇದು, ನಾನು ತುಂಬಾ ಹಿಂದಿನಿಂದಲೂ ಬೆಂಬಲಿಸಿಕೊಂಡು ಬಂದ ವಿಚಾರ. ನಗದು ರಹಿತ ವ್ಯವಹಾರ ಮತ್ತು ಭ್ರಷ್ಟಾಚಾರ ನಿಯಂತ್ರಣದತ್ತ ಮೊದಲ ಹೆಜ್ಜೆ’ ಎಂದು ಪ್ರಶಂಸೆ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞನಿಂದ ತಮಗೆ ಸಿಕ್ಕ ಈ ಶಹಬ್ಬಾಸ್ ಗಿರಿಯ ಬಗ್ಗೆ ಬಿಜೆಪಿಯವರು ಎಲ್ಲಾ ಕಡೆ ಹೇಳಿಕೊಂಡು ಭಾರಿ ಖುಷಿ ಪಟ್ಟಿದ್ದರು. ಆದರೆ, ಇದು ಕೇವಲ ತಾತ್ಕಾಲಿಕವಾಗಿತ್ತು. ಯಾವಾಗ ಮೋದಿ ಸರ್ಕಾರ 2 ಸಾವಿರ ರೂಪಾಯಿ ನೋಟನ್ನು ಚಲಾವಣೆಗೆ ತರಲಿದೆ ಎಂದು ಗೊತ್ತಾಯಿತೋ ಆಗ ಮತ್ತೆ  ಟ್ವೀಟ್ ಮಾಡಿದ ಥೇಲರ್ ಮಹಾಶಯರು ’ನಿಜವಾಗಿಯೂ? ಹಾಳಾಗಿಹೋಗಲಿ’ ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲಿಗೆ, ಮೋದಿ ಸರ್ಕಾರಕ್ಕೆ ಮಂಗಳಾರತಿ ಆದಂತಾಗಿತ್ತು. ಇದೀಗ ನೋಟು ರದ್ದತಿ ಆಗಿ ಒಂದು ವರ್ಷದ ಬಳಿಕ, ಮೋದಿ ಸರ್ಕಾರದ ಕ್ರಮ ‘ಬೆಟ್ಟ ಅಗೆದು ಇಲಿ ಹಿಡಿದಂತಾಯಿತು’ ಅನ್ನುವುದು ಬಹಿರಂಗವಾಗಿದೆ. ಇದೇ ವೇಳೆ, ಆ ಹೊತ್ತು ಥೇಲರ್ ಅವರು ಹಾಗೆ ಹೇಳಿದ್ದು ಏಕೆ ಅನ್ನುವುದೂ ಕೂಡ ಎಲ್ಲರಿಗೂ ಗೊತ್ತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ