ಸೈನಿಕರೇಕೆ ಸೂಸೈಡ್ ಮಾಡಿಕೊಳ್ಳುತ್ತಾರೆ?

Kannada News

10-10-2017

ವೈರಿಗಳ ಗುಂಡಿಗೆ ಸೀಳಬೇಕಾದ ನಮ್ಮ ಸೈನಿಕರು ಹೀಗೇಕೆ ಮಾಡಿಕೊಳ್ಳುತ್ತಾರೆ? ದೇಶಕ್ಕಾಗಿ ಪ್ರಾಣ ಅರ್ಪಿಸಲು ಸಿದ್ಧರಾದ ಇವರು ತಮ್ಮನ್ನು ತಾವು ಯಾತಕ್ಕಾಗಿ ಕೊಂದುಕೊಳ್ಳುತ್ತಾರೆ? ನಮ್ಮ ಸೈನಿಕರು ಆತ್ಮಹತ್ಯೆಮಾಡಿಕೊಳ್ಳಲು ಕಾರಣಗಳಾದರೂ ಏನು? ಎಂಬ ಪ್ರಶ್ನೆಗಳು ಮತ್ತೊಮ್ಮೆ ಕೇಳಿ ಬರುತ್ತಿವೆ. ಇದಕ್ಕೆ ಹಿನ್ನೆಲೆ ಒದಗಿಸಿದ್ದು ದಕ್ಷಿಣ ಕಾಶ್ಮೀರದಲ್ಲಿ  ಕರ್ತವ್ಯ ಸಲ್ಲಿಸುತ್ತಿದ್ದ ಬೆಂಗಳೂರಿನ ಯೋಧ ಆರ್‌. ನರೇಂದ್ರ ಮೊನ್ನೆಯಷ್ಟೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ.

ರಕ್ಷಣಾ ಇಲಾಖೆ ನೀಡುವ ಮಾಹಿತಿ ಪ್ರಕಾರ 2014ರ ಜನವರಿ 1 ರಿಂದ 2017ರ ಮಾರ್ಚ್ 31ರ ವರೆಗೂ 1185 ದಿನಗಳಲ್ಲಿ 348 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನಮ್ಮ ಸಶಸ್ತ್ರಪಡೆಗಳಾದ ಭೂಸೇನೆ, ವಾಯುಪಡೆ, ನೌಕಾಪಡೆಗಳಿಗೆ ಸೇರಿದಂತೆ ಮೂರೂ ವಿಭಾಗಗಳಿಂದ, ಪ್ರತಿ ಮೂರು ದಿವಸಕ್ಕೆ ಒಬ್ಬನಾದರೂ ಸೈನಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಇವರಲ್ಲಿ ಬಹುತೇಕರು ಭೂ ಸೇನೆಗೆ ಸೇರಿದವರಾಗಿದ್ದು, ಅದರಲ್ಲೂ ಭಯೋತ್ಪಾದಕರ ಹಾವಳಿ ಇರುವ ಜಮ್ಮು-ಕಾಶ್ಮೀರ ಮತ್ತು ಬಂಡುಕೋರರ ಹಾವಳಿ ಇರುವ ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರಂತೆ.

ಈ ಆತ್ಮ ಹತ್ಯೆಗಳಿಗೆ ವೈಯಕ್ತಿಕ ಸಮಸ್ಯೆಗಳು, ತಮ್ಮ ಊರಿನಲ್ಲಿನ ಭೂ ವಿವಾದಗಳು, ಅವುಗಳನ್ನು ಪರಿಹಾರ ಮಾಡದ ಸ್ಥಳೀಯ ಅಧಿಕಾರಿಗಳ ನಿರಾಸಕ್ತಿ ಇತ್ಯಾದಿ ಕಾರಣಗಳೇ ಹೆಚ್ಚು ಅನ್ನುವುದು ರಕ್ಷಣಾ ಇಲಾಖೆಯ ಮಾತು.

ಆದರೆ, ಸಾಕಷ್ಟು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಕರ್ನಲ್  ಒಬ್ಬರ ಪ್ರಕಾರ, ಭಯೋತ್ಪಾದಕರ ಹಾವಳಿ ಇರುವ ಪ್ರದೇಶಗಳು, ಸಿಯಾಚಿನ್ ನಂಥ ಮೂಳೆಯವರೆಗೂ ಕೊರೆಯುವ ಚಳಿಯಿರುವ ಹಿಮ ಪ್ರದೇಶಗಳಲ್ಲಿ ದೇಶ ಕಾಯುವ ಕೆಲಸ ಮಾಡುವುದು ಸುಲಭವಲ್ಲ. ಇಂಥ ಕಡೆಗಳಲ್ಲಿ, ದೀರ್ಘ ಕಾಲ ಸೇವೆ ಸಲ್ಲಿಸುವುದು, ಆ ಸೈನಿಕನ ಮಾನಸಿಕ ಮತ್ತು  ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ದೇಶ ಪ್ರೇಮ ಅನ್ನುವುದು, ಎಲ್ಲವನ್ನೂ ಸಹಿಸಿಕೊಂಡು ಮುಂದುವರಿಯುವಂತೆ ಮಾಡುತ್ತದೆ ಎನ್ನುತ್ತಾರೆ. ಇದರ ಜೊತೆಗೆ ಮನೆಯ ಕಡೆಯಲ್ಲೂ ಸಾಕಷ್ಟು ಸಮಸ್ಯೆಗಳಿದ್ದರೆ, ಇಂಥ ಪ್ರತಿಕೂಲ ಪರಿಸ್ಥಿತಿಯಿರುವ ಪ್ರದೇಶಗಳಲ್ಲಿ ಕೆಲಸ ಮಾಡುವುದು ತುಂಬಾ ಕಠಿಣವಾಗುತ್ತದೆ.

ಈ ಬಗ್ಗೆ ಚಿಂತನೆ ನಡೆಸಿರುವ ರಕ್ಷಣಾ ಇಲಾಖೆ, ಸೈನಿಕರಿಗೆ ಉತ್ತಮ ಸೌಕರ್ಯಗಳು ಮತ್ತು ಮಾನಸಿಕ ತೊಳಲಾಟ ಅನುಭವಿಸುತ್ತಿರುವ ಯೋಧರಿಗೆ ಆಪ್ತ ಸಲಹೆ ನೀಡುವ ವ್ಯವಸ್ಥೆಯನ್ನು ರೂಪಿಸಿದೆ. ಆದರೆ, ಮೂರು ದಿನಗಳಿಗೊಮ್ಮೆ ಒಬ್ಬ ಯೋಧ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಿದರೆ, ರಕ್ಷಣಾ ಇಲಾಖೆ ಕೈಗೊಂಡಿರುವ ಕ್ರಮಗಳು ಏನೇನೂ ಸಾಲುತ್ತಿಲ್ಲ ಅನ್ನುವುದು ತಿಳಿದುಬರುತ್ತದೆ. ಈಗಷ್ಟೇ ರಕ್ಷಣಾ ಇಲಾಖೆ ಜವಾಬ್ದಾರಿ ಹೊತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ