‘ನಿರ್ಮಲ’ ನಮಸ್ತೆ

Kannada News

09-10-2017

ಪ್ರಧಾನಿ  ನರೇಂದ್ರ  ಮೋದಿ ಅವರು ನಿರ್ಮಲಾ  ಸೀತಾರಾಮನ್ ಅವರನ್ನು ರಕ್ಷಣಾ ಸಚಿವರಾಗಿ ನೇಮಕ ಮಾಡಿದ ವಿಚಾರವೇ ಸಾಕಷ್ಚು ಸುದ್ದಿ ಮಾಡಿತ್ತು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ರಕ್ಷಣಾ ಇಲಾಖೆಗೆ ಒಂದಿಷ್ಟು ಹೊಸತನ ತಂದುಕೊಟ್ಟಿರುವ ನಿರ್ಮಲಾ ಸೀತಾರಾಮನ್, ಜಮ್ಮು-ಕಾಶ್ಮೀರ, ಸಿಯಾಚಿನ್ ಸೇನಾನೆಲೆ, ಗುಜರಾತ್‌ನ ಜಾಮ್‌ನಗರ ಮತ್ತು ಅಸ್ಸಾಮ್ ನ ತೇಜ್‌ಪುರದಲ್ಲಿರುವ ವಾಯುನೆಲೆಗಗೆ ಭೇಟಿಕೊಟ್ಟು ಸೈನಿಕರ ಮನೋಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಭಾರತದ ರಕ್ಷಣಾ  ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಇದೇ ರೀತಿ, ಭಾರತ-ಚೀನಾ ಗಡಿಯ ನಾಥು ಲಾ ಪ್ರದೇಶಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದಾಗ ಸ್ವಾರಸ್ಯಕರ ಸನ್ನಿವೇಶ ಉದ್ಭವವಾಗಿತ್ತು.  ನಿರ್ಮಲಾ ಅವರು, ನಾಥು ಲಾ ಗಡಿಯಲ್ಲಿ ಪರಿಶೀಲನೆ ಮಾಡುವಾಗ ಗಡಿಯಾಚೆಯಿಂದ ಚೀನಾ ದೇಶದ ಸೈನಿಕರು ಎದುರಾದರು, ಮುಗುಳ್ನಗೆ ಬೀರಿದ ನಿರ್ಮಲಾ, ಅವರತ್ತ ತೆರಳಿ ನಮಸ್ತೆ ಎಂದರು. ಆದನ್ನು ಸ್ವೀಕರಿಸಿದ ಚೀನಿ ಸೈನಿಕರೂ ಕೂಡ ಕೈ ಜೋಡಿಸಿ ನಮಸ್ತೆ ಎಂದರು. ಚೀನೀ ಸೈನಿಕರೊಡನೆ ಮಾತಿಗಿಳಿದ ನಿರ್ಮಲಾ, ನಮಸ್ತೆ ಎಂಬ ಪದಕ್ಕೆ ಅರ್ಥ ನಿಮಗೆ ಅರ್ಥ ಗೊತ್ತೇ ಎಂದು ಅವರನ್ನು ಕೇಳಿದರು. ಆ ಸಂದರ್ಭದಲ್ಲಿ ಉತ್ತರ ಹೇಳಲು ಪ್ರಯತ್ನಿಸಿದ ಭಾರತೀಯ ಸೇನೆಯ ಅಧಿಕಾರಿಗಳನ್ನು ಸುಮ್ಮನಿರುವಂತೆ ಸೂಚಿಸಿದರು. ಕೆಲ ಕ್ಷಣಗಳ ನಂತರ ಚೀನಾದ ಸೈನಿಕನೊಬ್ಬ ನಮಸ್ತೆ ಅಂದರೆ ನೈಸ್ ಮೀಟಿಂಗ್ ಯು ಎಂದು ಉತ್ತರಿಸಿದ. ಅಷ್ಟಕ್ಕೇ ಸುಮ್ಮನಾಗದ ನಿರ್ಮಲಾ ಅವರು ಚೀನೀ ಭಾಷೆಯಲ್ಲಿ ನಮಸ್ತೆ ಹೇಳುವುದು ಹೇಗೆ ಎಂದರು, ಅದಕ್ಕೆ ನಿಹಾವೊ ಎಂದು ಚೀನಿ ಸೈನಿಕ ಉತ್ತರ ಕೊಟ್ಟ. ರಕ್ಷಣಾ ಇಲಾಖೆ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿರುವ ಈ ದೃಶ್ಯಾವಳಿಗಳು ಫೇಸ್‌ ಬುಕ್ ಮತ್ತಿತರ ಸಾಮಾಜಿಕ ಜಾಲಗಳ  ಮೂಲಕ ದೇಶದೆಲ್ಲೆಡೆ ಹರಿದಾಡುತ್ತಿವೆ.

ಸಚಿವೆ ನಿರ್ಮಲಾ ಅವರು, ಚೀನಾ ಸೈನಿಕರನ್ನು ಒಮ್ಮೆ ತೀಕ್ಷ್ಣ ಕಣ್ಣುಗಳಿಂದ ನೋಡಿ ಅಲ್ಲಿಂದ ಮುಂದಕ್ಕೆ ಹೋಗಬಹುದಿತ್ತು, ಆದರೆ ಅದರ ಬದಲಿಗೆ ಸಹಜವಾಗಿ ವರ್ತಿಸಿ, ಅವರನ್ನು ಮಾತನಾಡಿಸಿ ಶುಭಾಶಯ ತಿಳಿಸಿದ ಸಚಿವೆ ನಿರ್ಮಲಾ ನಡವಳಿಕೆಗೆ ಭಾರತದಲ್ಲಿ ಮತ್ತು ಚೀನಾದಲ್ಲೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ