ನಿಮ್ಮ ಬ್ಯಾಂಕ್ ಇರುತ್ತೋ ಇಲ್ವೋ..?

Kannada News

07-10-2017

ಮೊನ್ನೆ ಮೊನ್ನೆಯಷ್ಟೇ ನಮ್ಮ ಎಸ್‌ಬಿಎಮ್ ಅಂದ್ರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು, ಎಸ್‌ಬಿಐ ಜೊತೆ ವಿಲೀನ ಮಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತಷ್ಟು ಬ್ಯಾಂಕ್‌ ಗಳು ವಿಲೀನವಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ತಿಳಿಸಿದ್ದಾರೆ.

ಸದ್ಯಕ್ಕೆ ದೇಶದಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕುಗಳಿದ್ದು, ಇವುಗಳ ಸಂಖ್ಯೆಯನ್ನು ಹತ್ತರಿಂದ ಹದಿನೈದರ ಒಳಗಿರುವಂತೆ ಮಾಡಲಾಗುತ್ತದಂತೆ. ಬ್ಯಾಂಕ್‌ ಗಳ ಬಲವರ್ಧನೆ ದೃಷ್ಟಿಯಿಂದ ಮತ್ತು ಸುಗಮ ಬ್ಯಾಂಕ್ ವ್ಯವಹಾರಕ್ಕಾಗಿ ಈ ಕ್ರಮ ಲಾಭದಾಯಕ ಎಂದು ಹೇಳಲಾಗಿದೆ.

ಈ ರೀತಿಯಲ್ಲಿ ಬ್ಯಾಂಕ್‌ ಗಳ ವಿಲೀನ ಪ್ರಕ್ರಿಯೆ ಆರಂಭಕ್ಕೆ ಮುನ್ನ, ಪ್ರಾದೇಶಿಕ ಸಮತೋಲನ, ಭೌಗೋಳಿಕ ವ್ಯಾಪ್ತಿ, ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಮತ್ತು ಸುಲಭ ರೀತಿಯಲ್ಲಿ ಸಿಬ್ಬಂದಿ ನಿಯೋಜನೆ ವಿಚಾರಗಳನ್ನು ದೃಷ್ಟಿಯಲ್ಲಿರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಬ್ಯಾಂಕ್‌ ಗಳ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಸಿಗಬೇಕು ಅನ್ನುವ ಉದ್ದೇಶಕ್ಕಾಗಿ ಎಸ್‌ಬಿಐ ಜೊತೆಗೆ ಎಸ್‍ಬಿಎಮ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಗಳನ್ನು ಕಳೆದ ಏಪ್ರಿಲ್‌ನಲ್ಲಿ ವಿಲೀನಗೊಳಿಸಲಾಗಿತ್ತು.

ಆನಂತರ ಎಸ್‌ಬಿಐ ನವರು, ಎಲ್ಲಾ ಸೇವೆಗಳಿಗೆ ದುಬಾರಿ ಅನ್ನುವ ರೀತಿಯ ರೀತಿಯ ಶುಲ್ಕಗಳನ್ನು ವಿಧಿಸಿ, ಗ್ರಾಹಕರಿಗೆ ತಮ್ಮ ವರಸೆಗಳನ್ನು ತೋರಿಸಲು ಆರಂಭಿಸಿದ್ದರು. ಉಳಿತಾಯ ಖಾತೆ ಮುಚ್ಚಲು 590 ರೂಪಾಯಿ ಕೀಳುತ್ತಿದ್ದ ಎಸ್‌ಬಿಐ ಕ್ರಮದ ವಿರುದ್ಧ ಇತ್ತೀಚೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವ್ಯಾಪಕ ಟೀಕೆ ಬಂದ ನಂತರ, ಎಸ್‌ಬಿಐ ಮೊನ್ನೆಯಷ್ಟೇ ಇದನ್ನು ಕೈ ಬಿಟ್ಟಿದೆ.

ಇದೆಲ್ಲಾ ಏನಾದರೂ ಇರಲಿ, ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ, ವಿಶ್ವೇಶ್ವರಯ್ಯನವರು ಸ್ಥಾಪಿಸಿದ್ದ ನಮ್ಮ ಪ್ರೀತಿಯ ಎಸ್‌ಬಿಎಮ್ ಅನ್ನು ಅಸ್ತಿತ್ವವೇ ಇಲ್ಲದ ಹಾಗೆ ಮಾಡಿದ್ದು, ಎಲ್ಲಾ ಕನ್ನಡಿಗರಿಗಂತೂ ತುಂಬಾ ಬೇಸರದ ವಿಚಾರ.

 


ಸಂಬಂಧಿತ ಟ್ಯಾಗ್ಗಳು

ನಿಮ್ಮ ಬ್ಯಾಂಕ್ ಇರುತ್ತೋ ಇಲ್ವೋ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ