ಸಚಿವರ ಮನೆಗೆ ಮುತ್ತಿಗೆ: ಕಲ್ಲೆಸೆತ..

Kannada News

07-10-2017

ಬೆಂಗಳೂರು: ಖಾಸಗಿ ಶಾಲೆಗಳು ಪೋಷಕರಿಂದ ಹೆಚ್ಚಿನ ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಮನೆಗೆ ಮುತ್ತಿಗೆ ಹಾಕಿ ಹೂಕುಂಡ, ಕಿಟಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಚಿವರ ನಿವಾಸಕ್ಕೆ ಇಂದು ಬೆಳಿಗ್ಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಕನ್ನಡ ಶಾಲೆ ಹೆಸರಲ್ಲಿ ಇಂಗ್ಲೀಷ್ ಶಾಲೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡೊನೇಷನ್ ಹಾವಳಿಗೆ, ಕಡಿವಾಣ ಹಾಕಬೇಕು. ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಸಚಿವರು ಮನೆಯಲ್ಲಿರದ ಕಾರಣ, ಪ್ರತಿಭಟನಕಾರರು ಆಕ್ರೋಶಗೊಂಡು ಮನೆಯ ಮುಂದೆ ಇದ್ದ ಹೂಕುಂಡಗಳನ್ನು ಒಡೆದು ಹಾಕಿದ್ದಾರೆ. ಕಿಟಕಿಗಳಿಗೂ ಹಾನಿ ಮಾಡಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ತಡವಾಗಿ ಆಗಮಿಸಿದ್ದು, ಈ ವೇಳೆಗಾಗಲೇ ಪ್ರತಿಭಟನಕಾರರ ಆಕ್ರೋಶಕ್ಕೆ ಹೂಕುಂಡ ಪುಡಿಯಾಗಿತ್ತು.

ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಚಿವರು, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ