ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ !

Kannada News

07-10-2017

ಬೆಂಗಳೂರು: ನಗರದ ಹೆಚ್‍.ಆರ್.ಬಿ.ಆರ್ ಲೇಔಟ್‍ ನ 3ನೇ ಬ್ಲಾಕ್‍ ನಲ್ಲಿ, ನಿನ್ನೆ ಮಧ್ಯರಾತ್ರಿ ಮನೆಗೆ ಹೋಗುತ್ತಿದ್ದ ಶಿಲ್ಲಾಂಗ್ ಮೂಲದ ಹೊಟೇಲ್ ಕಾರ್ಮಿಕನೊಬ್ಬನನ್ನು ಅಡ್ಡಗಟ್ಟಿ ಜಗಳ ತೆಗೆದು ಮೂವರು ದುಷ್ಕರ್ಮಿಗಳು, ಕಲ್ಲಿನಿಂದ ತಲೆಗೆ ಹೊಡೆದು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ಹೆಚ್‍.ಆರ್.ಬಿ.ಆರ್ ಲೇಔಟ್‍ ನ 3ನೇ ಬ್ಲಾಕ್‍ನ ನೆಹರೂ ರಸ್ತೆಯ ಸಂಜಯ್ (35)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ಶಿಲ್ಲಾಂಗ್‍ ನಿಂದ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಸಂಜಯ್, ಕಮ್ಮನಹಳ್ಳಿ ಚರ್ಚ್ ರಸ್ತೆ ಬದಿಯ ಮ್ಮೂಮೋಸ್ ಡಿಲಿಶಿಯಸ್ ಹೋಟೆಲ್‍ ನಲ್ಲಿ ಕೆಲಸ ಸೇರಿಕೊಂಡಿದ್ದನು.

ಹೋಟೆಲ್‍ ನ ಮಾಲೀಕ ಸಂಜಯ್‍ ಗೆ, ನೆಹರೂ ರಸ್ತೆಯ ತನ್ನ ಮನೆಯ ಬಳಿಯೇ ರೂಂ ಮಾಡಿಕೊಟ್ಟಿದ್ದರು. ರಾತ್ರಿ 12.30ರ ವೇಳೆ ಹೊಟೇಲ್‍ ನಲ್ಲಿ ಕೆಲಸ ಮುಗಿಸಿಕೊಂಡು ಹತ್ತಿರದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ನೆಹರೂ ರಸ್ತೆಯಲ್ಲಿ ಬೈಕ್‍ ನಲ್ಲಿ ಬಂದ ಮೂವರು ಅಡ್ಡಗಟ್ಟಿ ಏಕಾಎಕಿ ಜಗಳ ತೆಗೆದು ಕಲ್ಲಿನಿಂದ ಸಂಜಯ್ ತಲೆಗೆ ಹೊಡೆದು ಹೊಟ್ಟೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ತೀವ್ರ ರಕ್ತಸ್ರಾವದಿಂದ ಸಂಜಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ಕೊಲೆಗೂ ಮುನ್ನ ಸಂಜಯ್ ಕೆಲಸ ಮಾಡುತ್ತಿದ್ದ ಹೊಟೇಲ್ ಬಳಿ ಗಲಾಟೆ ನಡೆದಿದ್ದು ಅದೇ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಸಂಜಯ್‍ಗೆ ವಿವಾಹವಾಗಿದ್ದು ಪತ್ನಿ ಹಾಗೂ ತಂದೆ-ತಾಯಿ ಶಿಲ್ಲಾಂಗ್‍ ನಲ್ಲೇ ಇದ್ದಾರೆ. ಸಂಜಯ್‍ ನ ಸೋದರ ಸಂಬಂಧಿ ನಗರದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಆತ ನಗರಕ್ಕೆ ಕರೆದುಕೊಂಡು ಬಂದಿದ್ದ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸ್ ಇನ್ಸ್ ಪೆಕ್ಟರ್ ಮುನಿಕೃಷ್ಣ ಅವರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ