ಬೆಳಗಾವಿ ಅಧಿವೇಶನದಲ್ಲಿ ಏನಾಗಬಹುದು.?

Kannada News

07-10-2017 451

ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನವೆಂಬರ್ 7 ರಂದು ಬೆಳಗಾವಿಯಲ್ಲಿ ಆರಂಭವಾಗಲಿದೆ. ಬೆಳಗಾವಿಯಲ್ಲಿ ಆರಂಭವಾಗಲಿರುವ ಅಧಿವೇಶನ ನವೆಂಬರ್ 18 ರವರೆಗೂ ನಡೆಯಲಿದೆ ಎಂದು ಮೂಲಗಳು ವಿವರ ನೀಡಿವೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಧಿವೇಶನ ಭಾರೀ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆಯುವ ನಿರೀಕ್ಷೆಗಳಿವೆ.

ಮುಂದಿನ ದಿನಗಳಲ್ಲಿ ಮರಳಿ ಅಧಿಕಾರ ಹಿಡಿಯಬೇಕು ಎಂದು ಬಯಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಕೂಡಾ ಪ್ರತಿಪಕ್ಷಗಳ ಮೇಲೆ ಎರಗಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೇಂದ್ರದ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಕುರಿತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಸರ್ಕಾರ ಜಾರಿಗೆ ತಂದ ಭಾರೀ ನೋಟುಗಳ ಅಮಾನ್ಯೀಕರಣ ಹಾಗೂ ಜಿಎಸ್‍ಟಿಯಂತಹ ಕ್ರಮಗಳಿಂದ ಜನರಿಗಾಗಿರುವ ತೊಂದರೆಗಳ ಕುರಿತು ಮಾತನಾಡಲು ಹಾಗೂ ಮೋದಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿ ಬಿಜೆಪಿಯನ್ನು ತಬ್ಬಿಬ್ಬುಗೊಳಿಸಲು ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ವಿವರ ನೀಡಿವೆ.

ಸಾಮಾನ್ಯವಾಗಿ ಇತ್ತೀಚಿನವರೆಗೂ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ಧಾಳಿ ನಡೆಸುತ್ತಿದ್ದುವಾದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದ್ದು ಪ್ರತಿಪಕ್ಷಗಳು ಸರ್ಕಾರದ ತಪ್ಪುಗಳ ವಿರುದ್ಧ ಸಮರ ನಡೆಸಲು ಸಜ್ಜಾದರೆ, ಆಡಳಿತಾರೂಢ ಪಕ್ಷ ತಾನೇ ಖುದ್ದಾಗಿ ಪ್ರತಿಪಕ್ಷಗಳ ಮೇಲೆ ಧಾಳಿ ನಡೆಸುವ ತಂತ್ರಕ್ಕೆ ಮೊರೆ ಹೋಗಿದೆ.

ಹೀಗೆ ಮಾಡುವುದರ ಮೂಲಕ ಪ್ರತಿಪಕ್ಷಗಳು ರಾಜಕೀಯ ಲಾಭ ಮಾಡಿಕೊಳ್ಳದಂತೆ ನೋಡಿಕೊಳ್ಳುವುದು, ಸರ್ಕಾರದ ಸಾಧನೆಯನ್ನು ವಿವರಿಸಲು ವಿಧಾನಮಂಡಲವನ್ನು ಬಳಕೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶ ಎಂಬುದು ರಹಸ್ಯವೇನೂ ಅಲ್ಲ.

ಇದರ ನಡುವೆಯೂ ಸರ್ಕಾರದ ತಪ್ಪುಗಳ ವಿರುದ್ಧ ಪ್ರತಿಪಕ್ಷಗಳು ಕೂಡಾ ಟೀಕಾಸ್ತ್ರ ಪ್ರಯೋಗಿಸುವುದು ನಿಶ್ಚಿತವಾಗಿದ್ದು ಹೀಗಾಗಿ ನವೆಂಬರ್ ಏಳರಂದು ಆರಂಭವಾಗಲಿರುವ ಅಧಿವೇಶನ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ