ಕೇಂದ್ರದ ಮೇಲೆ ರಾಜ್ಯ ಬಿಜೆಪಿ ಕೋಪ !

Kannada News

07-10-2017

ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದ್ದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯೆ ದೊರೆಯುವ ಸಾಧ್ಯತೆಗಳು ಕ್ಷೀಣಿಸಿವೆ.

ರಾಜ್ಯದ ಹಿರಿಯ ನಾಯಕರೊಬ್ಬರಿಗೆ ರಾಜ್ಯಪಾಲರ ಹುದ್ದೆ ದೊರೆಯುವ ನಿರೀಕ್ಷೆ ಸಾಕಾರಗೊಂಡಿಲ್ಲ. ಕೇಂದ್ರ ಸಂಪುಟದಲ್ಲೂ ಸಹ ಹೆಚ್ಚಿನ ಪ್ರಾತಿನಿಧ್ಯೆ ಸಿಗಬಹುದು ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ. ಕೇಂದ್ರ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲೂ ರಾಜ್ಯದವರಿಗೆ ಮಣೆ ಹಾಕಿಲ್ಲ. ಕೇಂದ್ರದ ಈ ಧೋರಣೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಅಸಮಾಧಾನಗೊಂಡಿದ್ದು,  ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಾಗದೆ ತೊಳಲಾಟದಲ್ಲಿ ಸಿಲುಕಿದ್ದಾರೆ.

ಕೇಂದ್ರ ಸಂಪುಟಕ್ಕೆ ಈ ಬಾರಿ ಇಬ್ಬರು ಇಲ್ಲವೆ ಮೂರು ಮಂದಿಗೆ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಉತ್ತರ ಕನ್ನಡದ ಅನಂತ ಕುಮಾರ್ ಹೆಗಡೆ ಹೊರತುಪಡಿಸಿ ಉಳಿದ ಯಾರನ್ನೂ ಬಿಜೆಪಿ ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಸಂಘಪರಿವಾರ ಮೂಲದವರಿಗೆ ಮಾತ್ರ ಸಂಪುಟದಲ್ಲಿ ಹೆಚ್ಚಿನ ಅವಕಾಶ ನೀಡುವುದಾದರೆ ಪಕ್ಷ ಸಂಘಟನೆ ಮಾಡಿದ ಉಳಿದವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೂ ಸಹ ಆದ್ಯತೆ ನೀಡಿಲ್ಲ.

ಕೇಂದ್ರ ಸಂಪುಟದಲ್ಲಿರುವ ಅನಂತ್ ಕುಮಾರ್ ಮತ್ತು ಅನಂತ ಹೆಗಡೆ ಇಬ್ಬರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಕ್ಕಲಿಗ ಸಮುದಾಯದ ಸದಾನಂದಗೌಡ ಅವರಿದ್ದಾರೆ. ದಲಿತ ಸಮುದಾಯದ ರಮೇಶ್ ಜಿಗಜಿಣಗಿ ಸಚಿವರಾಗಿದ್ದಾರೆ.

ಉಳಿದಂತೆ ವೀರಶೈವ ಸಮುದಾಯದ ಜಿ.ಸಿದ್ದೇಶ್ವರ್ ಅವರನ್ನು ಸಂಪುಟದಿಂದ ಪದಚ್ಯುತಗೊಳಿಸಿ, ಅವರ ಸ್ಥಾನಕ್ಕೆ ಪರ್ಯಾಯ ಇಲ್ಲದಂತೆ ಮಾಡಲಾಗಿದೆ. ಪ್ರಭಾಕರ ಕೋರೆ ಇಲ್ಲವೆ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಬಹುದಾಗಿತ್ತು. ಇಲ್ಲಿ ವೀರ ಶೈವ ಸಮುದಾಯದವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ರಾಜ್ಯ ಸರ್ಕಾರ ಲಿಂಗಾಯಿತ – ವೀರಶೈವ ಪ್ರತ್ಯೇಕ ಧರ್ಮ ಸ್ಥಾಪನೆಗೆ ಇನ್ನಿಲ್ಲದಂತಹ ಪ್ರಯತ್ನ ನಡೆಸುತ್ತಿದೆ. ಪ್ರಬಲ ಲಿಂಗಾಯಿತ ಮತ ಬ್ಯಾಂಕ್ ಒಡೆಯುವ, ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಮುಂದಾಗಿದೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸಂಪುಟದಲ್ಲಿ ಲಿಂಗಾಯಿತ - ವೀರಶೈವರಿಗೆ ಆದ್ಯತೆ ಇಲ್ಲದಂತಾಗಿದೆ. ಹೀಗಾದರೆ ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕ ಪಕ್ಷದ ಪ್ರಮುಖ ನಾಯಕರನ್ನು ಕಾಡುತ್ತಿದೆ.ಇನ್ನು ರಾಜ್ಯಪಾಲರ ಹುದ್ದೆಗೂ ಸಹ ರಾಜ್ಯದಿಂದ ಯಾರಿಗೂ ಅವಕಾಶ ನೀಡಿಲ್ಲ. ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುತ್ತಾರೆ ಎನ್ನುವ ನಿರೀಕ್ಷೆ ಠುಸ್ ಆಗಿದೆ.

ಇಡೀ ದೇಶದಲ್ಲಿ ಕಾಂಗ್ರೆಸ್ ಗೆ ಗಟ್ಟಿನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಇಂತಹ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ ವಿವಿಧ ಜಾತಿ, ಸಮುದಾಯಗಳಿಗೆ ಅಧಿಕಾರ ಕೊಡಬೇಕು. ಅಧಿಕಾರ ಕೊಟ್ಟು ಅಧಿಕಾರ ಹಿಡಿಯುವ ರಾಜಕೀಯ ಜಾಣ್ಮೆ ಪ್ರದರ್ಶನ ಮಾಡಬೇಕಾಗಿತ್ತು. ಆದರೆ ವರಿಷ್ಠರು ಇದ್ಯಾವುದನ್ನೂ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಕೇಂದ್ರದ ವಿವಿಧ ನೇಮಕಾತಿಗಳಲ್ಲೂ ರಾಜ್ಯದವರನ್ನು ಪರಿಗಣಿಸುತ್ತಿಲ್ಲ. ಉತ್ತರ ಭಾರತದವರಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುವ ಅಸಮಾಧಾನ ಮಡುಗಟ್ಟಿದೆ.

ಡಿ.ಎಚ್.ಶಂಕರಮೂರ್ತಿ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀರ್ಮಾನ ಕೈಗೊಂಡಿದ್ದರು. ಶಂಕರಮೂರ್ತಿ ಅವರನ್ನು ದೆಹಲಿಗೆ ಕರೆಸಿಕೊಂಡು ಈ ಸಂಬಂಧ ಮಾತುಕತೆಯನ್ನೂ  ಸಹ ನಡೆಸಿದ್ದರು. ಶೀಘ್ರದಲ್ಲೇ ನಿಮಗೆ ಶುಭ ಸಂದೇಶ ಬರುತ್ತದೆ ಎಂದೇ ಹೇಳಿದ್ದರು. ಆದರೆ ರಾಜ್ಯಪಾಲರ ಹುದ್ದೆಯೂ ಕೈ ತಪ್ಪಿ ಹೋಯಿತು.

ಚುನಾವಣಾ ಪರ್ವದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಪ್ರಾತಿನಿಧ್ಯೆ ನೀಡದಿದ್ದರೆ ಚುನಾವಣೆ ಎದುರಿಸುವುದು ಹೇಗೆ. ವರಿಷ್ಠರ ನಿಲುವು ಬದಲಾಗದಿದ್ದರೆ ಚುನಾವಣಾ ಸಮರದಲ್ಲಿ ಜನರ ಆಕ್ರೋಶ ಎದುರಿಸುವುದು ಕಷ್ಟವಾಗುತ್ತದೆ ಎನ್ನುವ ಅಸಮಾಧಾನವನ್ನು ಪಕ್ಷದ ರಾಜ್ಯ ನಾಯಕರು ಹೊಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ