ಮೋದಿಗೆ ತಟ್ಟುತ್ತಿದೆ ಬಿಸಿ !

Kannada News

07-10-2017

ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿಯಲ್ಲಿ ಆಳವಾದ ಅಧ್ಯಯನವಿಲ್ಲದೆ ಜಾರಿಗೊಳಿಸಿದ್ದರಿಂದ ಜಿಡಿಪಿಯಲ್ಲಿ ಭಾರೀ ಇಳಿಕೆಯಾಗಿ, ಆರ್ಥಿಕತೆ ಸರಿಯಾಗುತ್ತಿಲ್ಲ ಎಂಬುದನ್ನ ಬಿಜೆಪಿ ಮುಖಂಡರಾದ ಯಶವಂತ ಸಿನ್ಹಾ, ಅರುಣ್ ಶೌರಿಯಂಥವರು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ.

ಬೇರೆ ಯಾರೇ ಆದರೂ ಮೋದಿಯನ್ನ ಟೀಕಿಸಿದರೆ ಮಹಾತಪ್ಪು ಎಂದು ಪರಿಗಣಿಸುವ ಪ್ರವೃತ್ತಿ ಬೆಳೆಯುತ್ತಿರುವಾಗ, ಸ್ವಪಕ್ಷೀಯರೇ ಈ ರೀತಿ ಟೀಕಿಸಿದರೆ ತಡೆದುಕೊಳ್ಳುವುದು ಹೇಗೆ..? ಜನಮಾನಸದಲ್ಲಿ ವ್ಯತಿರಿಕ್ತ ಅಭಿಪ್ರಾಯ ಮೂಡಿದರೇನು ಮಾಡುವುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ತಮ್ಮ ಪಕ್ಷದವರ ಟೀಕೆಗಳನ್ನು ತಪ್ಪಿಸುವ ಪ್ರಯತ್ನವಾಗಿ ಹಲವಾರು ವಸ್ತುಗಳ ಮೇಲಿನ ಜಿಎಸ್‍ಟಿ ಕಡಿಮೆಗೊಳಿಸುವ ತಂತ್ರಕ್ಕೆ ಮೊರೆಹೋಗಲಾಗಿದೆ ಎನ್ನಲಾಗುತ್ತಿದೆ.

ಆದರೆ ಪಕ್ಷದೊಳಗೆಯೇ ಪ್ರಧಾನಿ ಮೋದಿ ವಿರುದ್ಧ ಪಡೆಯೊಂದು ಎದ್ದು ನಿಲ್ಲುತ್ತಿದೆಯೇ ಎಂಬುದೂ ಈಗ ಕುತೂಹಲಕ್ಕೆಡೆಯಾಗಿದೆ. ಲಾಲ್ ಕೃಷ್ಣ ಅಡ್ವಾಣಿಯಂತಹ ಹಿರಿಯರನ್ನು ವಯಸ್ಸಿನ ಕಾರಣವನ್ನೊಡ್ಡಿ ಮೂಲೆಗುಂಪಾಗಿಸಲಾಗಿದೆ. ಬಿಜೆಪಿ ಎಂದರೀಗ ಮೋದಿ ಮತ್ತು ಅಮಿತ್ ಷಾ ಮಯವಾಗಿದೆ ಹೊರತು, ಇನ್ಯಾರಿಗೂ ಬೆಲೆಯೇ ಇಲ್ಲ, ಪರಿಣಾಮವಾಗಿ ಅಡ್ವಾಣಿ ಬೆಂಬಲಿತ ಗುಂಪು ಇತ್ತೀಚೆಗೆ ತಮ್ಮ ಧ್ವನಿಯನ್ನ ಮೋದಿ ವಿರುದ್ಧ ಎತ್ತಲಾರಂಭಿಸಿದೆ. ಇದರ ಫಲಿತಾಂಶವೇ ಯಶವಂತ್ ಸಿನ್ಹಾ, ಅರುಣ್ ಶೌರಿಯಂಥವರು ಟೀಕೆಗಳನ್ನ ಮಾಡುತ್ತಿರುವುದು, ಏನಾದರಾಗಲಿ ಮೋದಿ ಮತ್ತಷ್ಟು ಏಕಚಕ್ರಾಧಿಪತಿಯಂತೆ ಬೆಳೆಯಲು ಬಿಡಬಾರದು, ಹಿರಿಯರಿಗೂ ಬೆಲೆ ಕೊಡುವಂತಾಗಬೇಕು ಎಂಬುದೇ ಈ ಗುಂಪಿನ ಉದ್ದೇಶವಾಗಿದ್ದು, ಇದಕ್ಕೆ ಅಡ್ವಾನಿಯವರ ಸಮ್ಮತಿಯನ್ನ ಪಡೆದುಕೊಂಡೇ, ನಿಧಾನವಾಗಿ ಮೋದಿ ನಿಲುವಿನ ವಿರುದ್ಧ ಉಸಿರೆತ್ತಲು ಶುರುಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಮೋದಿ ದೇವಾಲಯ ಕಟ್ಟಿಸುತ್ತಿರುವಂಥದ್ದು, ಇಡೀ ಪಕ್ಷ ಮತ್ತು ಸರ್ಕಾರವನ್ನು ಪ್ರಧಾನಿಯೇ ಕೈವಶ ಮಾಡಿಕೊಂಡಿರುವುದು, ತಪ್ಪು ಆರ್ಥಿಕ ನೀತಿಗಳು, ಜನಪರ ಯೋಜನೆಗಳಿಗಿಂತ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕೇ ಆದ್ಯತೆ ಕೊಡುತ್ತಿರುವಂಥದ್ದು, ಇವೆಲ್ಲವನ್ನು ಮುಂದಿಟ್ಟುಕೊಂಡೇ, ಅಡ್ವಾನಿಯವರ ಗುಂಪು ನರೇಂದ್ರ ಮೋದಿ ವಿರುದ್ಧ ಜಾಗೃತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಬಿರುಕು ಹೆಚ್ಚುವಂಥ ಲಕ್ಷಣಗಳಿದ್ದು, ಮೋದಿ-ಷಾ ಜೋಡಿ ಇದನ್ನ ಹತ್ತಿಕ್ಕಲು ಏನು ಮಾಡಲಿದೆ ಎಂಬ ಕುತೂಹಲಗಳು ಬಿಜೆಪಿಯಲ್ಲಿವೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ