ಚೆನ್ನೈಗೆ ಚಿನ್ನಮ್ಮ..!

Kannada News

06-10-2017

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರಿಗೆ 5 ದಿನಗಳ ಕಾಲ ಪೆರೋಲ್ ಮಂಜೂರಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಯಾವುದೇ ರಾಜಕೀಯ ಸಭೆಗಳನ್ನು ನಡೆಸಬಾರದು, ರಾಜ್ಯ ಬಿಟ್ಟು ಬೇರೆ ಕಡೆಗಳಿಗೆ ತೆರಳಬಾರದು ಮುಂತಾದ ಷರತ್ತುಗಳನ್ನು ವಿಧಿಸಿ ಪೆರೋಲ್ ಮಂಜೂರು ಮಾಡಲಾಗಿದೆ. ಸಂಬಂಧಿಗಳ ಮನೆಯಲ್ಲಿ ನೆಲೆಸಲು ಮತ್ತು ಪತಿ ಇರುವ ಆಸ್ಪತ್ರೆಗೆ ತೆರಳಲು ಶಶಿಕಲಾ ಅವರಿಗೆ ಅನುಮತಿ ನೀಡಲಾಗಿದೆ.

ಶಶಿಕಲಾ ಅವರಿಗೆ ಪೆರೋಲ್ ದೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಶಶಿಕಲಾ ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್ ಹಾಗೂ ಶಶಿಕಲಾ ಅಭಿಮಾನಿಗಳು ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನ ಬಳಿ ಜಮಾವಣೆಗೊಂಡಿದ್ದರು. ತಮಿಳುನಾಡು ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು.

ಶಶಿಕಲಾ ಅವರ ಪತಿ ಎಂ.ನಟರಾಜನ್ ಅವರು ಅನಾರೋಗ್ಯಕ್ಕೀಡಾಗಿದ್ದು, ಚೆನ್ನೈನ ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಅಂಗ ಕಸಿ ಶಸ್ತ್ರ ಚಿಕಿತ್ಸೆಯಾಗಿತ್ತು. ಇದೇ ಕಾರಣಕ್ಕೆ ಶಶಿಕಲಾ ಈ ಹಿಂದೆ 15 ದಿನಗಳ ಪೆರೋಲ್‍ ಗೆ  ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಅರ್ಜಿಯನ್ನು ಅಧಿಕಾರಿಗಳು ಪುರಸ್ಕರಿ 5 ದಿನಗಳ ಕಾಲ ಪೆರೋಲ್ ಮಂಜೂಮಾಡಿದ್ದಾರೆ.

ಶಶಿಕಲಾ ಪೆರೋಲ್ ಅರ್ಜಿ ಸಲ್ಲಿಸಿದ ಬಳಿಕ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಚೆನ್ನೈ ಪೊಲೀಸ್ ಕಮಿಷನರ್‍ ಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್ ಆಯುಕ್ತರು, ಶಶಿಕಲಾ ಪೆರೋಲ್ ಮೇಲೆ ಬಂದರೆ ಯಾವುದೇ ರೀತಿಯ ತೊಂದರೆಯಿಲ್ಲ, ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದು ಎಂದು ನಿರಾಕ್ಷೇಪಣಾ ಪತ್ರ ಬರೆದಿದ್ದರು. ಹೀಗಾಗಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಶಶಿಕಲಾ ಅವರನ್ನು ಪೆರೋಲ್ ಮೇಲೆ ಕಳುಹಿಸಲು ನಿರ್ಧರಿಸಿದ್ದರು. ಓರ್ವ ವ್ಯಕ್ತಿಯ ಶ್ಯೂರಿಟಿ ಆಧಾರದ ಮೇಲೆ ಶಶಿಕಲಾ ಅವರಿಗೆ ಪೆರೋಲ್ ದೊರೆತಿದೆ..

ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಶಿಕಲಾ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಂಖ್ಯೆ `9234' ಕೈದಿಯಾಗಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ