ಬಿಜೆಪಿ ಟಕೆಟ್ ಆಕಾಂಕ್ಷಿಗಳಲ್ಲಿ ತಳಮಳ !

Kannada News

06-10-2017 716

ಬೆಂಗಳೂರು: ವಿಧಾನ ಪರಿಷತ್ ​ನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯತಂತ್ರ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಹುಟ್ಟುಹಾಕಿದೆ. ಸಾಮಾನ್ಯವಾಗಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವರ್ಷಗಳ ಮುಂಚೆಯೇ ಬಿಜೆಪಿ ತಯಾರಾಗುವುದು ವಾಡಿಕೆ. ಆದರೆ ಈ ಬಾರಿ ಕಾಂಗ್ರೆಸ್ ಆ ಕೆಲಸ ಮಾಡಿದ್ದರೆ ಬಿಜೆಪಿ ಈ ವಿಚಾರದಲ್ಲಿ ಉದಾಸೀನ ಧೋರಣೆ ತಾಳಿದೆ. ಅಭ್ಯರ್ಥಿಗಿಂತ ಪಕ್ಷವನ್ನೇ ಮುಂದು ಮಾಡಿ ಚುನಾವಣೆಗೆ ಹೋಗಬಾರದೇಕೆ ಎಂಬ ಆಲೋಚನೆ ವರಿಷ್ಠರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

 2018ರ ಜೂನ್​ ನಲ್ಲಿ ಪರಿಷತ್ ​ನ ನೈಋತ್ಯ, ಈಶಾನ್ಯ, ಮತ್ತು ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ, ದಕ್ಷಿಣ, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇದೀಗ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿಗಳು ಯಾರಾಗಬೇಕೆಂಬ ಬಗ್ಗೆ ತೀರ್ವನವಾಗಿಲ್ಲ. ಆದರೆ ಕಾಂಗ್ರೆಸ್​ ನಲ್ಲಿ ಅಭ್ಯರ್ಥಿಗಳ ಹೆಸರು ಈಗಾಗಲೇ ಅಂತಿಮವಾಗಿದೆ. ಜೆಡಿಎಸ್​ ನಲ್ಲಿ 2 ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿಯೇ ಈ ಆರು ಕ್ಷೇತ್ರಗಳ ಅಭ್ಯರ್ಥಿ ಕುರಿತು ಒಂದು ಸುತ್ತಿನಲ್ಲಿ ಚರ್ಚೆ ನಡೆಸಲಾಗಿದೆಯಾದರೂ ಅಂತಿಮ ತೀರ್ವನಕ್ಕೆ ಬಂದಿಲ್ಲ. ಆರು ಕ್ಷೇತ್ರಗಳ ಪೈಕಿ ನಾಲ್ಕು ಸ್ಥಾನಗಳು ಬಿಜೆಪಿ ವಶದಲ್ಲಿವೆ. ಆದರೆ, ಅವಧಿ ಪೂರೈಸುತ್ತಿರುವ ಡಿ.ಎಚ್.ಶಂಕರಮೂರ್ತಿ ಮತ್ತು ರಾಮಚಂದ್ರ ಗೌಡ ಅವರು ಮುಂದಿನ ಬಾರಿಗೆ ಮರು ಆಯ್ಕೆಗೆ ಆಸಕ್ತಿ ತೋರಿಲ್ಲ. ಆದರೆ ಆಕಾಂಕ್ಷಿಗಳು ಮಾತ್ರ ಸುಮ್ಮನೆ ಕುಳಿತಿಲ್ಲ. ಅಳುಕಿನಲ್ಲೆ ಪ್ರಯತ್ನ ಶುರು ಮಾಡಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ