ಕೇಂದ್ರದಿಂದ ಟೆಲಿಫೋನ್ ಇಲಾಖೆ ದುರ್ಬಳಕೆ !

Kannada News

06-10-2017

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡಬೇಕೇ, ಇಲ್ಲವೇ ಎಂಬ ಗೊಂದಲಗಳಿವೆ. ಇದನ್ನು ಬಗೆಹರಿಸಿಕೊಳ್ಳಲು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭ್ರಷ್ಟ್ರಾಚಾರ ನಿಗ್ರಹ ದಳ ತನ್ನ ಕಾರ್ಯವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದೆ. ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಬಂಧ ಈವರೆಗೂ ಯಾವುದೇ ಸಭೆಗಳು ನಡೆದಿಲ್ಲ. ಆದರೆ, ನಿನ್ನೆಯಿಂದ ವಿಷಯ ಚರ್ಚೆಯಾಗುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಧಿಕಾರ ಇದೆಯೇ ಎಂಬ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಟೆಲಿಫೋನ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರಬಹುದು ಎಂಬ ಅನುಮಾನದಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ನಮ್ಮ ದೂರವಾಣಿ ಸಂಖ್ಯೆಯಗಳು ಟ್ಯಾಪ್ ಆಗಿರುವ ಬಗ್ಗೆ ಬಹಳ ಹಿಂದೆಯೇ ನಾನು ಹೇಳಿಕೆ ನೀಡಿದ್ದೆ. ಈಗ ಆದಾಯ ತೆರಿಗೆ ಅಧಿಕಾರಿಯೊಬ್ಬರು ಎಸಿಬಿ ದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪತ್ರ ಬರೆದಿರುವುದು ನೋಡಿದರೆ ಕೇಂದ್ರ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುತ್ತಿರಬಹುದು ಎಂದರು.

ಇನ್ನು ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಶೀಘ್ರವೇ ಆರೋಪಿಗಳನ್ನು ಬಂಧಿಸಲಿದೆ ಎಂಬ ವಿಶ್ವಾಸವಿದೆ. ಸದ್ಯದಲ್ಲಿ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ಸುಳಿವು ಸಿಕ್ಕಿರುವ ಬಗ್ಗೆ, ಆರೋಪಿಗಳ ಬಂಧನದ ಬಗ್ಗೆ ಮತ್ತೊಂದು ಬಾರಿ ಮಾತನಾಡುತ್ತೇನೆ ಎಂದರು.

              ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ