ರಾಜ್ಯ ಸಾಧನೆ ಕೇಂದ್ರದ ವೈಫಲ್ಯ ಮುಂದಿಡಿ..!

Kannada News

06-10-2017

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್ ಪಾಲ್ಗೊಂಡಿದ್ದರು.

ಅಲ್ಲದೇ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಸಿ.ಎಂ.ಇಬ್ರಾಹಿಂ, ನೂತನ ಸಚಿವರಾದ ಗೀತಾ ಮಹದೇವ ಪ್ರಸಾದ್, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಅವರನ್ನು ಶಾಸಕಾಂಗ ಸಭೆಯಲ್ಲಿ ಅಭಿನಂದಿಸಿದರು.

ಇನ್ನು ಸಭೆಯಲ್ಲಿ ಮಾತನಾಡಿಸ ಸಿಎಂ ಸಿದ್ದರಾಮಯ್ಯ, ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಬೂತ್ ಸಮಿತಿ ರಚನೆ, ಬೂತ್ ಏಜೆಂಟರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಹಲವಾರು ಕ್ರಮ ಕೈಗೊಳ್ಳಲಾಗಿದೆ, ಮತ್ತು ಜಿಲ್ಲಾ ಮಟ್ಟದಲ್ಲಿ ಭಿನ್ನಮತ ನಿವಾರಣೆ ಪ್ರಯತ್ನವೂ ನಡೆದಿದೆ. ಇದಕ್ಕಾಗಿ ಜಿಲ್ಲೆಗಳಲ್ಲಿ ಸಮನ್ವಯ ಸಮಿತಿಗಳ ರಚನೆಯೂ ಆಗಿದೆ ಎಂದು ತಿಳಿಸಿದರು.

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶ. ಜನಪರ ಕಾರ್ಯಕ್ರಮಗಳ ಬಗ್ಗೆ ಜನರ ಮೆಚ್ಚುಗೆಯೂ ಇದೆ. ಇದರ ಜೊತೆಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸಾಧನೆ ವಿವರಿಸಿದರೆ ಕಾರ್ಯಕ್ರಮ ಯಶಸ್ವಿ ಆಗುತ್ತದೆ. ಶಾಸಕರೂ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುವುದರ ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು ಎಂದ ಅವರು, ಪ್ರಧಾನಿ ಮೋದಿ ಅವರ ಬಾಯಿ ಬಡಾಯಿ, ಸಾಧನೆ ಶೂನ್ಯ. ಆದರೂ ಬಿಜೆಪಿಯವರು ಜನರಿಗೆ ಸುಳ್ಳು ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ನಾವು ಸುಳ್ಳು ಹೇಳುವ ಅಗತ್ಯ ಇಲ್ಲ. ಸರ್ಕಾರದ ಸಾಧನೆಗಳನ್ನು ತಿಳಿಸಿದರೆ ಸಾಕು ಎಂದರು.

ಹೀಗಾಗಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಶಾಸಕರು ಹೆಚ್ಚು ಆಸಕ್ತಿ ವಹಿಸಬೇಕು. ಮನೆ ಮನೆಗೆ ತೆರಳಿ ಮತದಾರರ ನಾಡಿ ಮಿಡಿತ ಅರಿತರೆ, ಸರ್ಕಾರದ ಸಾಧನೆ ವಿವರಿಸಿದರೆ ಪಕ್ಷದ ಜೊತೆಗೆ ಶಾಸಕರಿಗೂ ಅನುಕೂಲ, ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲೂ ಸಿದ್ಧತೆ ಆಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುವುದರಿಂದ ಜನ ಸಹ ಖುಷಿಯಾಗಿದ್ದಾರೆ. ಸರ್ಕಾರದ ಕಾರ್ಯಕ್ರಮ ಎಲ್ಲಿಯೇ ನಡೆದರೂ ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದರಿಂದ ನಮ್ಮ ಕೆಲಸ ಅವರಿಗೆ ಸಮಾಧಾನ ತಂದಿದೆ ಎನಿಸುತ್ತಿದೆ.  ಈಗಿನ ವಾತಾವರಣ ನೋಡಿದರೆ ಯಾರು ಏನೇ ಹೇಳಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ಇನ್ನೂರರಷ್ಟು ಖಚಿತ ಎಂದು ನುಡಿದರು.

ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಶಾಸಕಾಂಗ ಸಭೆಗೆ ನಾನು ಇದುವರೆಗೂ ಬಂದಿಲ್ಲ, ಅದಕ್ಕಾಗಿ ಈ ವಿಶೇಷ ಸಭೆ ಕರೆಯಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಪೂರಕ ವಾತಾವರಣ ಇದೆ. ಅದನ್ನು ಎಲ್ಲರೂ ಸೇರಿ ಪರಿಣಾಮಕಾರಿಯಾಗಿ ಬಳಸಿಕೊಳ್ಳೋಣ ಎಂದರು.

              



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ