ರಾಜ್ಯ: ಬಯಲು ಶೌಚ ಮುಕ್ತ ಅನುಮಾನ !

Kannada News

06-10-2017 485

ಬೆಂಗಳೂರು: ಬರುವ 2018ರ ಅಕ್ಟೋಬರ್ 2 ರ ವೇಳೆಗೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಗುರಿ ತಲುಪಲು ಸಾಗಬೇಕಾದ ಹಾದಿ ಇನ್ನೂ ಬಹು ದೂರ ಇದ್ದು, ರಾಜ್ಯದ 19 ಜಿಲ್ಲೆಗಳು, ನೂರಕ್ಕೂ ಹೆಚ್ಚು ತಾಲ್ಲೂಕುಗಳು ಬಯಲು ಶೌಚ ಮುಕ್ತವಾಗಬೇಕಾಗಿದೆ.

ಶೌಚಾಲಯಗಳ ನಿರ್ಮಾಣ ಆಮೆ ವೇಗದಲ್ಲಿ ಸಾಗಿದ್ದು, ನಿರೀಕ್ಷಿತ ಗುರಿ ತಲುಪುವ ಅನುಮಾನ ವ್ಯಕ್ತವಾಗಿದೆ. ಇನ್ನು ನಗರ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ತೀವ್ರಗತಿಯಲ್ಲಿ ನಡೆಯುತ್ತಿಲ್ಲ. ಒಂದೆಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತೊಂದೆಡೆ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

ಶೌಚಾಲಯ ನಿರ್ಮಾಣದಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಮಂಚೂಣಿಯಲ್ಲಿದ್ದ ಕರ್ನಾಟಕ ಇದೀಗ ತೀವ್ರ ಹಿನ್ನೆಡೆ ಅನುಭವಿಸುವಂತಾಗಿದೆ. ನಿರ್ಮಲ ಕರ್ನಾಟಕ ಅಭಿಯಾನದ ಮೂಲಕ ಬಯಲು ಬಹಿರ್ದೆಸೆ ಮುಕ್ತವಾಗುವ ನಿಟ್ಟಿನಲ್ಲಿ ತೀವ್ರ ಗತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ನಂತರ ಶೌಚಾಲಯಕ್ಕಾಗಿ ಸಮರ ಆರಂಭಿಸಲಾಗಿತ್ತಾದರೂ ಈ ಸಮರಕ್ಕೆ ಅಷ್ಟೇನು ಪ್ರತಿಫಲ ದೊರೆತಿಲ್ಲ.

ಕೆಲವು ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಉತ್ತಮ ಸಾಧನೆಯಾಗಿದ್ದು, ಇನ್ನೂ ಹಲವು ಕಡೆಗಳಲ್ಲಿ ನಿರೀಕ್ಷೆಯಂತೆ ಕೆಲಸ ಆಗುತ್ತಿಲ್ಲ. ಇದು ಗುರಿ ಸಾಧನೆಗೆ ಅಡ್ಡಿಯಾಗಿದೆ.

ಪ್ರಸ್ತುತ 11 ಜಿಲ್ಲೆಗಳು, 74 ತಾಲ್ಲೂಕುಗಳು, 2900 ಗ್ರಾಮ ಪಂಚಾಯತ್‍ಗಳು ಮಾತ್ರ ಬಯಲು ಬಹಿರ್ದೆಶೆ ಮುಕ್ತಗೊಂಡಿವೆ. ರಾಜ್ಯದ ಶೇ 70 ರಷ್ಟು ಕುಟುಂಬಗಳು ಶೌಚಾಲಯ ವ್ಯವಸ್ಥೆ ಹೊಂದಿದೆ. ಇನ್ನೂ 20 ಲಕ್ಷ ಕುಟುಂಬಗಳು ಶೌಚಾಲಯ ಹೊಂದಬೇಕಾಗಿದೆ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣದಲ್ಲಿ ವ್ಯತ್ಯಾಶ ಕಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವ ಪರಿಸ್ಥಿತಿ ಇದ್ದರೆ ನಗರ ಪ್ರದೇಶಗಳು ಬಯಲು ಬಹಿರ್ದೆಸೆಗೊಳ್ಳುವ ಕಾರ್ಯ ಅಷ್ಟೇನು ಸುಲಲಿತವಾಗಿ ನಡೆಯುತ್ತಿಲ್ಲ.

ಈ ವರ್ಷದ ಡಿಸೆಂಬರ್ ವೇಳೆಗೆ ಗದಗ್, ಧಾರವಾಡ, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಳಗಾವಿ, ತುಮಕೂರು, ಬಳ್ಳಾರಿ, ಚಾಮರಾಜನಗರ, ಬಾಗಲಕೋಟೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಬಯಲು ಶೌಚ ಮುಕ್ತವಾಗುವ ಗುರಿ ಹಾಕಿಕೊಳ್ಳಲಾಗಿದೆ.

ಈ ಪೈಕಿ ಉತ್ತರ ಕನ್ನಡ ಶೇ 99 ರಷ್ಟು ಪ್ರಗತಿ ಸಾಧಿಸಿದೆ. ಗದಗ್, ಧಾರವಾಡ, ಕೊಪ್ಪಳ ಜಿಲ್ಲೆಗಳು ಕ್ರಮವಾಗಿ ಶೇ 97, ಶೇ 93 ಮತ್ತು ಶೇ 92 ರಷ್ಟು ಶೌಚಾಲಯಗಳನ್ನು ನಿರ್ಮಿಸಿಕೊಂಡಿವೆ. ಹಾವೇರಿ ಶೇ 82 ಮತ್ತು ದಾವಣಗೆರೆ ಶೇ 90 ರಷ್ಟು ಸಾಧನೆ ಮಾಡಿವೆ.

ಉಳಿದಂತೆ ಚಿಕ್ಕಬಳ್ಳಾಪುರ ಶೇ 76 ಮತ್ತು ಮೈಸೂರು ಶೇ 79 ರಷ್ಟು ಸಾಧನೆ  ಮಾಡಿದೆ. ಬೆಳಗಾವಿ ಶೇ 64, ತುಮಕೂರು ಶೇ 63, ಬಳ್ಳಾರಿ ಶೇ 55, ಚಾಮರಾಜನಗರ ಶೇ 52, ಬಾಗಲಕೋಟೆ ಶೇ 54 ಮತ್ತು ಚಿತ್ರದುರ್ಗ ಅತ್ಯಂತ ಕಡಿಮೆ ಅಂದರೆ ಶೇ 48 ರಷ್ಟು ಮಾತ್ರ ಪ್ರಗತಿ ಹೊಂದಿವೆ. ಈ ಅಂಕಿ ಅಂಶಗಳನ್ನು ನೋಡಿದರೆ 8 ರಿಂದ 9  ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗುವ ಕನಸು ನನಸಾಗುವ ಸಾಧ್ಯತೆಗಳಿಲ್ಲ.

ಇದಲ್ಲದೇ ಹೈದರಾಬಾದ್ ಕರ್ನಾಟಕ ಭಾಗದ ಕಲಬುರಗಿ ಶೇ 43, ರಾಯಚೂರು ಶೇ 36, ಬೀದರ್ ಶೇ 33, ಯಾದಗಿರಿ ಶೇ 28 ಮತ್ತು ಬಿಜಾಪುರ ಜಿಲ್ಲೆಯಲ್ಲಿ ಶೇ 28 ರಷ್ಟು ಶೌಚಾಲಯ ನಿರ್ಮಾಣವಾಗಿದ್ದು, ಈ ಜಿಲ್ಲೆಗಳು ತೀರಾ ಕಳಪೆ ಸಾಧನೆ ಮಾಡಿವೆ. ಈ ಜಿಲ್ಲೆಗಳನ್ನು ಬರುವ ವರ್ಷದ ಮಾರ್ಚ್ ವೇಳೆಗೆ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಕಿಕೊಂಡಿದ್ದು, ಇವು ಬಯಲು ಬಹಿರ್ದೆಸೆ ಮುಕ್ತಗೊಳ್ಳುವುದು ಕನಸಿನ ಮಾತಾಗಿದೆ. 

ಈ ಎಲ್ಲಾ ಜಿಲ್ಲೆಗಳಿಗೆ ಕೋಲಾರ ಮಾದರಿಯಾಗಿದೆ. ಇದೇ ಅಕ್ಟೋಬರ್ 2 ರಷ್ಟು ಬಯಲು ಸೀಮೆಯ ಕೋಲಾರ ಓ.ಡಿ.ಎಫ್ ಆದ ಕೀರ್ತಿಗೆ ಭಾಜನವಾಗಿದೆ. ಈ ಮುನ್ನ ಕೋಲಾರ ಜಿಲ್ಲೆ ಬಯಲು ಶೌಚಮುಕ್ತವಾದರೆ ಇಡೀ ರಾಜ್ಯ ಇಂತಹ ಉನ್ನತ ಸಾಧನೆ ಮಾಡಿದಂತಾಗುತ್ತದೆ ಎಂದು ಹೇಳಲಾಗಿತ್ತು. ಕೋಲಾರ ಜತೆಗೆ ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳು ಸಹ ಶೇ 100 ರಷ್ಟು ಶೌಚಾಲಯ ಹೊಂದಿ ಇತರ ಜಿಲ್ಲೆಗಳಿಗೆ ಸೆಡ್ಡು ಹೊಡೆದಿದೆ. 

ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಮೂಲಕ ಬರುವ 2019ರ ಅಕ್ಟೋಬರ್ 2 ರ ವೇಳೆಗೆ ಇಡೀ ದೇಶ ಬಯಲು ಬಹಿರ್ದೆಶೆ ಮುಕ್ತಗೊಳಿಸಲು ಹೊರಟಿದೆ.  ಆದರೆ ರಾಜ್ಯ ಸರ್ಕಾರ ಇನ್ನೂ ಒಂದು ವರ್ಷ ಮುಂಚೆ ಅಂದರೆ 2018ರ ಅಕ್ಟೋಬರ್ 2ರ ವೇಳೆಗೆ ಈ ಸಾಧನೆ ಮಾಡಲು ಹೊರಟಿದೆ. ಈ ಮಹತ್ವಾಂಕ್ಷಿಯ ಗುರಿ ತಲುಪುವ ಸಾಧ್ಯತೆಯ ಸರ್ಕಾರದ ಅಂಕಿ ಅಂಶಗಳು ಅನುಮಾನ ವ್ಯಕ್ತಪಡಿಸುತ್ತವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ