ಎಸಿಬಿ ಮೂಲಕ ದಾಳಿಗೆ ಸಂಚು ರೂಪಿಸಿಲ್ಲ..

Kannada News

05-10-2017

ಬೆಂಗಳೂರು: ರಾಜ್ಯ ಸರ್ಕಾರ, ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸುವ ಯಾವುದೇ ಯೋಜನೆ ರೂಪಿಸಿಲ್ಲ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಸಿಬಿ ಮೂಲಕ ಐಟಿ ಅಧಿಕಾರಿಗಳ ಮೇಲೆ ದಾಳಿಗೆ ಯೋಜನೆ ರೂಪಿಸಿದೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆಯೇ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾ ರೆಡ್ಡಿ ಅವರು, ರಾಜ್ಯ ಸರ್ಕಾರ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿಗೆ ಸಂಚು ರೂಪಿಸಿಲ್ಲ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಇಂತಹುದೊಂದು ವಿಚಾರ ಐಟಿ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಅವರಿಗೆ ಏಕೆ ಬಂದಿತು ಎಂಬುದು ನನಗೆ ತಿಳಿಯುತ್ತಿಲ್ಲ. ಆದರೆ ನಾವು ಕೇಂದ್ರದ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡಿಲ್ಲ. ಇನ್ನೂ ಕೇಂದ್ರ ಸರ್ಕಾರವೇ ಬಿಜೆಪಿಯೇತರ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ಮೂಲಕ ದ್ವೇಷದ ರಾಜಕಾರಣ ನಡೆಸುತ್ತಿದೆ. ದೇಶದ ಬಹುತೇಕ ಕಡೆಗಳಲ್ಲಿ ನಡೆದ ಐಟಿ ದಾಳಿಗಳು ರಾಜಕೀಯ ದ್ವೇಷ ಪೂರಿತದ್ದೇ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.

ಇದೇ ವೇಳೆ ಐಟಿ ಇಲಾಖೆ ಎಸಿಬಿ ವ್ಯಾಪ್ತಿಗೆ ಬರುತ್ತದೆಯೇ ಎಂಬ ವಿಚಾರದ ಬಗ್ಗೆ ಚರ್ಚೆಯಾಗಿರಬಹುದು ಅಥವಾ ಅಗದೆಯೂ ಇರಬಹುದು. ಈ ಬಗ್ಗೆ ಐಟಿ ಮಹಾ ನಿರ್ದೇಶಕರಿಗೆ ಕನಸೇನಾದರೂ ಬಿದ್ದಿತ್ತೇ..ಈ ವಿಚಾರ ಅವರಿಗೆ  ಹೇಗೆ ತಿಳಿಯಿತು. ಇದರಿಂದಲೇ ತಿಳಿಯುತ್ತದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ದೂರವಾಣಿಗಳನ್ನು ಕದ್ದಾಲಿಸುತ್ತಿದೆ ಎಂದು. ಆದರೆ ರಾಜ್ಯ ಸರ್ಕಾರ ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸುವ ಕುರಿತು ಚರ್ಚಿಸಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ