ಗಾಯಕ್ಕೆ ಇನ್ನು ಹೊಲಿಗೆ ಇಲ್ಲ, ಪಿನ್ನೂ ಇಲ್ಲ…

Kannada News

05-10-2017

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನಂತರ ದೇಹದ ಆ ಭಾಗವನ್ನು ಮತ್ತೆ ಒಂದುಗೂಡುವಂತೆ ಮಾಡಲು, ಹೊಲಿಗೆ ಹಾಕುತ್ತಾರೆ ಅಥವ ಲೋಹದ ಪಿನ್‌ ಗಳನ್ನು ಅಳವಡಿಸುತ್ತಾರೆ. ದೊಡ್ಡ ಗಾಯಗಳಾದಾಗಲೂ ಇದೇ ರೀತಿ ಮಾಡುತ್ತಾರೆ. ಕೆಲವು ದಿನಗಳ ಬಳಿಕ, ಹೊಲಿಗೆ ಅಥವ ಪಿನ್‌ ಗಳನ್ನು ತೆಗೆಯಲಾಗುತ್ತದೆ. ಆದರೆ, ಇನ್ನುಮುಂದೆ ಈ ರೀತಿ ಮಾಡುವ ಅಗತ್ಯವೇ ಬರುವುದಿಲ್ಲ. ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು, ಸ್ಥಿತಿಸ್ಥಾಪಕತ್ವ ಅಂದರೆ ಎಲಾಸ್ಟಿಕ್ ಗುಣವುಳ್ಳ ಮತ್ತು ಸುಲಭವಾಗಿ ಅಂಟಿಕೊಳ್ಳುವ ಸರ್ಜಿಕಲ್ ಗ್ಲೂ ಅಭಿವೃದ್ಧಿಪಡಿಸಿದೆ.

ತಲೆಗೂದಲಿಗೆ ಹಚ್ಚುವ ಜೆಲ್ ರೀತಿಯಲ್ಲಿರುವ ಈ ಹೊಸ ಅಂಟು, ದೇಹದ ಒಳಗಿನ ಮತ್ತು ಹೊರಗಿನ ಗಾಯಗಳನ್ನು ಕೇವಲ 60 ಸೆಕೆಂಡುಗಳಲ್ಲಿ ಹೌದು ಒಂದೇ ನಿಮಿಷದಲ್ಲಿ ಸೀಲ್ ಮಾಡುತ್ತದೆ ಅಂದರೆ ಮುಚ್ಚುತ್ತದೆ. ಈ ಜೆಲ್ ಆನ್ನು ಹಚ್ಚಿದ ಬಳಿಕ, ಆ ಭಾಗವನ್ನು ಭದ್ರಪಡಿಸಲು ultraviolet light ಬಳಸುತ್ತಾರಂತೆ. ಗಾಯ ವಾಸಿಯಾಗಲು ಸಹಾಯ ಮಾಡುವ ಈ ethacryloyl-substituted tropoelastin ಎಂದು ಕರೆಯುವ ಜೆಲ್, ದೇಹದ ಅಂಗಗಳು ಅಥವ ಚರ್ಮದ ಹಿಗ್ಗುವಿಕೆಗೆ ಯಾವ ರೀತಿಯಲ್ಲೂ ತೊಂದರೆ ಉಂಟುಮಾಡುವುದಿಲ್ಲ. ಗಾಯದ ತೀವ್ರತೆ ಆಧರಿಸಿ, ಈ ಜೆಲ್ ಅನ್ನು ಇಂತಿಷ್ಟೇ ಗಂಟೆಗಳು ಅಥವ ದಿನಗಳವರೆಗೆ ಇರಬೇಕು ಅನ್ನುವ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವುದೂ ಸಾಧ್ಯವಿದೆ. ದೇಹಕ್ಕೆ ಯಾವುದೇ ವಿಷಕಾರಿ ಅಂಶವನ್ನೂ ಸೇರಿಸದ ಈ ಜೆಲ್, ನಿರ್ದಿಷ್ಟ ದಿನಗಳು ಕಳೆದ ಬಳಿಕ, ತನ್ನಷ್ಟಕ್ಕೆ ತಾನೇ ಕರಗಿಹೋಗುತ್ತದೆ.

ಯುದ್ಧದ ಸಮಯ, ರಸ್ತೆ, ರೈಲು ಅಪಘಾತಗಳು, ಉಗ್ರರ ವಿರುದ್ಧ ಕಾರ್ಯಾಚರಣೆ ಇತ್ಯಾದಿ ತುರ್ತು ಸಂದರ್ಭಗಳಲ್ಲಂತೂ ಈ ಹೊಸ ಜೀವರಕ್ಷಕ ಜೆಲ್ ಅತ್ಯಂತ ಉಪಕಾರಿಯಾಗಲಿದೆ. ಆದರೆ, ಈ ಹೊಸ ಜೆಲ್ ಅನ್ನು ಈವರೆಗೆ ಪ್ರಾಣಿಗಳ ಮೇಲೆ ಪರೀಕ್ಷಿಸಲಾಗಿದ್ದು ಇನ್ನಷ್ಟೇ ಮಾನವರ ಮೇಲೆ ಬಳಸಬೇಕಾಗಿದೆಯಂತೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ