ಹಂತಕರ ಪತ್ತೆಗೆ ಇನ್ನೊಂದು ಹೆಜ್ಜೆ ಬಾಕಿ !

Kannada News

05-10-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳು ಕಳೆದಿದೆ. ಬಲಗಳ ನಡುವಿನ ಸಂಘರ್ಷದ ನಡುವೆಯೇ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ಗೆ ಗೌರಿ ಹಂತಕರು ಯಾರು ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆಯಾದರೂ ಅವರ ಬಂಧನ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಳೆದ ಸೆ.5ರ ರಾತ್ರಿ ಗೌರಿ ಲಂಕೇಶ್ ನಿವಾಸದ ಬಳಿ ಅವರ ಮೂರು ಸುತ್ತು ಗುಂಡಿನ ಹಾರಿಸಿ ಕೊಲೆಗೈದು ಪರಾರಿಯಾದ ಹೆಲ್ಮೆಟ್ ಧರಿಸಿದ ದುಷ್ಕರ್ಮಿ ಪತ್ತೆಗಾಗಿ ರಚಿಸಲಾಗಿರುವ ಐಜಿಪಿ ಬಿಕೆ ಸಿಂಗ್ ನೇತೃತ್ವದ ಎಸ್‍ಐಟಿ ಅಧಿಕಾರಿಗಳು ಹಂತಕನ ಸ್ಪಷ್ಟ ಚಿತ್ರಣ ಪತ್ತೆಹಚ್ಚಿದ್ದು ಸೂಕ್ತ ಸಾಕ್ಷಾಧಾರಗಳಿಗಾಗಿ ಶೋಧ ನಡೆಸಿದ್ದಾರೆ.

ಸುಮಾರು 120 ಮಂದಿ ದಕ್ಷ ಅಧಿಕಾರಿಗಳಿರುವ ಎಸ್‍ಐಟಿಯನ್ನು ಎಂಟು ತಂಡಗಳಾಗಿ ವಿಗಂಡಿಸಿ ವೈಯುಕ್ತಿಕ, ನಕ್ಸಲ್ ವಿಚಾರ, ಗೌರಿ ಲಂಕೇಶ್ ಪತ್ರಿಕೆ ಮೇಲೆ ದಾಖಲಾದ ಮಾನನಷ್ಟ ಪ್ರಕರಣ, ಬಲಪಂಥೀಯರ ಕೈವಾಡ, ಹೀಗೆ ಎಂಟು ಕೋನಗಳಲ್ಲಿ ತನಿಖೆ ನಡೆಸಲಾಗಿದೆ.

ಇಲ್ಲಿಯವರೆಗೆ ಇನ್ನೂರಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿದ್ದು ಅದರಲ್ಲಿ ಮಾಜಿ ಭೂಗತ ದೊರೆಗಳು, ಮಾಜಿ ನಕ್ಸಲೈಟ್‍ಗಳು ಸ್ಥಳೀಯ ರೌಡಿಗಳು, ಹೀಗೆ, ಅನುಮಾನವಿರುವ ಎಲ್ಲರನ್ನ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಲಾಗಿದೆ ಅದರಲ್ಲಿ ಹಂತಕನ ನಿಖರ ಚಿತ್ರಣ ದೊರೆತಿದೆಯಾದರೂ ಸಾಕ್ಷಾಧಾರಗಳನ್ನು ಕಲೆಹಾಕುವುದು ಕಷ್ಟಕರವಾಗಿದೆ.

ಕೊಲೆ ಮಾಡಿದ ಹಂತಕರ ಸ್ಪಷ್ಟವಾದ ಮಾಹಿತಿ ಗೊತ್ತಿದ್ದರೂ ಅವರೆಲ್ಲಿ ಅಡಗಿದ್ದಾರೆ ಎನ್ನುವುದನ್ನು ಪತ್ತೆಹಚ್ಚುವುದು ಕೂಡ ಸವಾಲಾಗಿ ಪರಿಣಮಿಸಿದೆ. ಅವರ ಜಾಗ ಪತ್ತೆಗೆ ಇನ್ನೊಂದು ಹೆಜ್ಜೆ ಬಾಕಿಯಿದ್ದು ಅದನ್ನು ಭೇದಿಸಿದರೆ, ಗೌರಿ ಹಂತಕರ ಸೆರೆ ಖಚಿತ ಎನ್ನಲಾಗುತ್ತಿದೆ.

ತನಿಖೆಯ ಹಂತದಲ್ಲಿ ಗೌರಿ ಕಚೇರಿ ಇರುವ ಗಾಂಧಿ ಬಜಾರ್ ನಿಂದ ಹಿಡಿದು ರಾಜರಾಜೇಶ್ವರಿ ನಗರದ ಗೌರಿ ಮನೆಯವರೆಗಿನ ಎಲ್ಲ ಸಿಸಿಟಿವಿಗಳನ್ನೂ ಪೊಲೀಸರು ಜಾಲಾಡಿದ್ದಾರೆ. ಹಂತಕರು ಯಾವ ರಸ್ತೆಯಲ್ಲಿ ಗೌರಿಯನ್ನು ಹಿಂಬಾಲಿಸಿದರು ಎಂಬುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿರಲಿಲ್ಲ ಹಂತಕರ ಬೈಕ್ ಇರಲಿ, ಗೌರಿಯ ಕಾರೂ ಕೂಡ ಸಿಸಿಟಿವಿಗಳಲ್ಲಿ ದಾಖಲಾಗಿಲ್ಲ.

ಇನ್ನು ಹಂತಕರು ಮೊಬೈಲ್ ಬಳಸಿರಬಹುದು ಎಂಬ ಕಾರಣಕ್ಕೆ ಗಾಂಧಿ ಬಜಾರ್ ನಿಂದ ಹಿಡಿದು ಗೌರಿಯ ಮನೆಯವರೆಗಿನ ಎಲ್ಲ ಮೊಬೈಲ್ ಟವರ್‍ ಗಳಲ್ಲಿ ದಾಖಲಾದ ಮೊಬೈಲ್ ಕರೆಗಳನ್ನು ಪರಿಶೀಲನೆ ಮಾಡಲಾಗಿದೆ. ಸುಮಾರು ಎರಡು ಲಕ್ಷ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲನೆ ನಡೆಸಿದರೂ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ, ಅದರೆ ಎಲ್ಲಾ ಕೋನಗಳ ತನಿಖೆಯಲ್ಲಿ ನಾಲ್ಕೈದು ದಿನಗಳ ಹಿಂದೆ ಹಂತಕನ ಸ್ಪಷ್ಟ ಚಿತ್ರಣ ದೊರೆತಿದೆ, ಸೂಕ್ತ ಸಾಕ್ಷಾಧಾರಗಳಿಗಾಗಿ ಶೋಧ ನಡೆಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಸವಾಲಾದ ಹಂತಕರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ