ಮಳೆಯಿಂದಾಗಿ 96 ಜನ ಸಾವು !

Kannada News

05-10-2017

ಬೆಂಗಳೂರು: ರಾಜ್ಯದಲ್ಲಿ ಕಳೆದ ಮಾರ್ಚ್‌ ತಿಂಗಳಿನಿಂದ ಈವರೆಗೆ ಮಳೆ ಅವಘಡಗಳಿಂದಾಗಿ 96 ಜನರು ಮೃತಪಟ್ಟಿದ್ದು, 751 ಜಾನುವಾರುಗಳು ಸಾವಿಗೀಡಾಗಿರುವುದೂ ಅಲ್ಲದೆ ಒಟ್ಟು 2,993 ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪ್ರಮಾಣವನ್ನು ಗುರುತಿಸುವ ಕೆಲಸವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಅಧ್ಯಯನ ನಡೆಸಿ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳು ಗಡುವು ನೀಡಲಾಗಿದೆ ಎಂದರು.

ಗ್ರಾಮ ಲೆಕ್ಕಾಧಿಕಾರಿ, ತೋಟಗಾರಿಕೆ ಕೃಷಿ ಹಾಗೂ ಕಂದಾಯ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೆಳೆ ನಷ್ಟ ಪ್ರಮಾಣವನ್ನು ಖುದ್ದಾಗಿ ಅಧ್ಯಯನ ನಡೆಸಲು ಸೂಚನೆ ನೀಡಲಾಗುವುದು ಎಂದುರು. ಕಳೆದ ಜೂನ್‌ ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಮುಂಗಾರು ಹಂಗಾಮಿನ ಅವಧಿಯಾಗಿದ್ದು, ಈ ಸಂದರ್ಭದಲ್ಲಿ ಆಗಿರುವ ಬೆಳೆ ನಷ್ಟ ಗುರುತಿಸಲಾಗುವುದು ಎಂದು ಅವರು, ಮುಂದಿನ ವಾರದ ಸಭೆಯ ನಂತರ ಬೆಳೆ ನಷ್ಟ ವರದಿಯನ್ನು ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಮನವಿ ಸಲ್ಲಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.  ಕಳೆದ ವರ್ಷಕ್ಕೆ ಹೋಲಿಸಿದರೆ, ಮುಂಗಾರು ಹಂಗಾಮಿನಲ್ಲಿ ಮಳೆ ಬಿದ್ದಿರುವುದು ಸಮಾಧಾನಕರ ಸ್ಥಿತಿ ಉಂಟುಮಾಡಿದೆ. ಅಷ್ಟಾಗಿ ಬರ ಪರಿಸ್ಥಿತಿ ಕಾಣುತ್ತಿಲ್ಲ ಎಂದರು.

ಇನ್ನು ಹುಕುಂ ಸಾಗುವಳಿ ಅಡಿಯಲ್ಲಿ ಇನ್ನು 2.5 ಲಕ್ಷದಷ್ಟು ಅರ್ಜಿಗಳು ಇತ್ಯರ್ಥಕ್ಕಾಗಿ ಕಾದಿವೆ. ಗೋಮಾಳ ಜಮೀನು ಹಂಚಿಕೆ ಸಂಬಂಧ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದನ್ನು ತೆರವುಗೊಳಿಸುವ ಕೆಲಸ ಮಾಡಲಾಗುವುದು ಎಂದರು.

ಅಲ್ಲದೇ ಅಕ್ರಮ ಸಕ್ರಮ ಯೋಜನೆಯಡಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿವುದನ್ನು ಅಕ್ರಮ ಸಕ್ರಮಗೊಳಿಸಲು ನಿಗದಿ ಪಡಿಸಿರುವ ಗಡುವನ್ನು ಇನ್ನೆರಡು ತಿಂಗಳು ವಿಸ್ತರಣೆ ಮಾಡಲಾಗುವುದು. ಹೊಸದಾಗಿ ಅರ್ಜಿ ಕರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

 

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಮಳೆಯಿಂದಾಗಿ 96 ಜನ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ