‘ಲೂಟ್ ಕಿ ಬಾತ್’ ಸರ್ಕಾರ...!

Kannada News

05-10-2017

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು `ಕಾಮ್ ಕಿ ಬಾತ್’ ಸರ್ಕಾರವಲ್ಲ. `ಲೂಟ್ ಕಿ ಬಾತ್’ ಸರ್ಕಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ನಡೆಸಿದ್ದಾರೆ. 

ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ, ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್, ಪೌರ ಕಾರ್ಮಿಕರು ಸ್ವಚ್ಛ ಭಾರತ, ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸೇರಿದಂತೆ, ವಿವಿಧ ಇಲಾಖೆಗಳಲ್ಲಿ ನೂರಾರು ಕೋಟಿ ರೂ. ಲೂಟಿ ಹೊಡೆಯಲಾಗಿದೆ. ಇಲಾಖೆ ಸಚಿವರನ್ನು ಪಕ್ಕಕ್ಕಿಟ್ಟು ತಮ್ಮ ಮೂಗಿನ ನೇರಕ್ಕೆ ಟೆಂಡರ್ ಕರೆದು ಬೇಕಾದವರಿಗೆ ನೀಡಿದ್ದಾರೆ. ಅವ್ಯವಹಾರದ ಬಗ್ಗೆ ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು 34 ಸಾವಿರ ಪೌರ ಕಾರ್ಮಿಕರ ಹೆಸರೇಳಿಕೊಂಡು ಹನ್ನೊಂದೂವರೆ ಸಾವಿರ ಪೌರ ಕಾರ್ಮಿಕರಿಗೆ ಮಾತ್ರ ಸಂಬಳ ನೀಡಲಾಗುತ್ತಿದೆ. 8 ಲಕ್ಷ ರೂ. ವೆಚ್ಚದಲ್ಲಿ ಆಗಬೇಕಾಗಿದ್ದ ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು 28 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಆರೋಗ್ಯ ಸಚಿವರಿಗೆ ಗೊತ್ತಿಲ್ಲದ ಹಾಗೆ ಮಾತೃಪೂರ್ಣ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಕೇಂದ್ರ ಸರ್ಕಾರ ನೀಡಿದ ಹಣವನ್ನು ಲೂಟಿ ಹೊಡೆದಿರುವುದೂ ಸೇರಿದಂತೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅವರು ಆಗ್ರಹಿಸಿದರು.

ಮಾತೃಪೂರ್ಣ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ಇಲಾಖೆಯ ಕಾರ್ಯದರ್ಶಿ ಶಾಲಿಯ ರಜನೀಶ್ ಅವರೇ ಹೇಳಿದ್ದಾರೆ. ಸಚಿವ ರಮೇಶ್ ಕುಮಾರ್ ಅವರ ಗಮನಕ್ಕೆ ತರದಂತೆ ಟೆಂಡರ್ ಕರೆದಿದ್ದಾರೆ. ರಮೇಶ್ ಕುಮಾರ್ ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆಯೇ ಎನ್ನುವ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಏಡ್ಸ್ ಪ್ರೀವೆನ್ಷನ್ ಸೊಸೈಟಿಗೆ ನೀಡಿದ್ದ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಆ ಹಣವನ್ನು ಹಿಂದಕ್ಕೆ ಪಡೆದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದರು. ಇನ್ನು ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್.ಐ.ಎ.ಕಚೇರಿಯನ್ನು ಆರಂಭಿಸುವಂತೆ ರಾಜಾನಾಥ್ ಸಿಂಗ್ ಅವರಿಗೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ