ಸಿಸಿಬಿ ಪೊಲೀಸರ ಮೇಲೆ ಹಲ್ಲೆ !

Kannada News

04-10-2017

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಬಡಾವಣೆಯಲ್ಲಿ ನಿನ್ನೆ ರಾತ್ರಿ, ರೌಡಿಗಳನ್ನು ಹಿಡಿಯಲು ಬಂದ ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಇಬ್ಬರು ರೌಡಿಗಳು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ರೌಡಿಗಳು ನಡೆಸಿದ ಹಲ್ಲೆಯಿಂದ ಸಿಸಿಬಿಯ ಹೆಡ್ ಕಾನ್ಸ್ ಟೇಬಲ್ ಅರುಣ್ ತಲೆಗೆ ಗಾಯಗೊಂಡು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯವೆಸಗಿ ಪರಾರಿಯಾಗಿರುವ ಕಾಮಾಕ್ಷಿ ಪಾಳ್ಯದ ರೌಡಿಗಳಾದ ಗುರುಮೂರ್ತಿ ಅಲಿಯಾಸ್ ಟೋಪಿ, ರಾಜು ಅಲಿಯಾಸ್ ಲಕ್ಕಿಗಾಗಿ ರಾತ್ರಿಯಿಡೀ ಶೋಧ ನಡೆಸಿದರೂ ಪತ್ತೆಯಾಗಿಲ್ಲ.

ಕೊಲೆಯತ್ನ, ಸುಲಿಗೆ, ಬೆದರಿಕೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಗಳಾದ ಗುರುಮೂರ್ತಿ ಹಾಗೂ ರಾಜು ರಾತ್ರಿ 11ರ ವೇಳೆ ಅನ್ನಪೂರ್ಣೇಶ್ವರಿ ನಗರದ ಬಳಿ, ಸ್ಯಾಂಟ್ರೋ ಕಾರಿನಲ್ಲಿ ಹೋಗುತ್ತಿದ್ದ, ಖಚಿತ ಮಾಹಿತಿಯಾಧರಿಸಿದ ಸಿಸಿಬಿ ಅಪರಾಧ ವಿಭಾಗದ ಅರುಣ್, ಸತೀಶ್, ನರಸಿಂಹಮೂರ್ತಿ ಸೇರಿದಂತೆ ಐವರು ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದಾರೆ.

ಹೆಲ್ತ್ ಲೇಔಟ್ ಬಳಿ ರೌಡಿಗಳಿದ್ದ ಸ್ಯಾಂಟ್ರೋ ಕಾರು ಬಂದಿದ್ದನ್ನು ಮಾರುತಿ ವ್ಯಾನ್‍ ನಲ್ಲಿ ಬಂದ ಸಿಸಿಬಿ ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಕಾರಿನಿಂದ ಇಳಿದ ಅರುಣ್, ಸ್ಯಾಂಟ್ರೋ ಕಾರಿನ ಬಳಿ ಹೋಗಿ ಕಾರಿನ ಕೀ ಕಿತ್ತುಕೊಂಡು ಹಿಡಿಯಲು ಹೋಗಿದ್ದಾರೆ. ಅಷ್ಟರಲ್ಲಿ ರೌಡಿಗಳು ಅರುಣ್ ನ ಕೈಗೆ ಹಲ್ಲೆ ನಡೆಸಿ ದೂರ ತಳ್ಳಿ ಕಾರನ್ನು ಹಿಂತೆಗೆದುಕೊಂಡು ಪರಾರಿಯಾಗಿದ್ದಾರೆ.

ದೂರ ಬಿದ್ದ ಅರುಣ್ ತಲೆಗೆ ಗಾಯವಾಗಿದ್ದು, ಅವರನ್ನು ಕೂಡಲೇ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಲ್ಲೆ ನಡೆಸಿ, ಪರಾರಿಯಾಗಿರುವ ರೌಡಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ