ಉರುಳಿದ ಬಸ್: 8 ಮಂದಿಗೆ ಗಾಯ !

Kannada News

04-10-2017

ಬೆಂಗಳೂರು: ನಗರದ ಕೆಂಗೇರಿಯ ದುಬಾಸಿ ಪಾಳ್ಯ ಜಂಕ್ಷನ್ ಬಳಿ, ಇಂದು ಬೆಳಿಗ್ಗೆ  ವೇಗವಾಗಿ ಹೋಗುತ್ತಿದ್ದ ಆರ್ಚಿಡ್ ಇಂಟರ್ ನ್ಯಾಷನಲ್ ಸ್ಕೂಲ್‍ ನ ಬಸ್ ಯು-ಟರ್ನ್ ತೆಗೆದುಕೊಳ್ಳುವಾಗ ಬೈಕ್, ಬಿಎಂಟಿಸಿ ಬಸ್‍ ಗೆ  ಡಿಕ್ಕಿ ಹೊಡೆದು ಉರುಳಿ ಬಿದ್ದು ಪಾದಚಾರಿಯೊಬ್ಬ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಈ ಸರಣಿ ಅಪಘಾತದಲ್ಲಿ ಮೃತಪಟ್ಟ ಪಾದಚಾರಿಯನ್ನು ಕೆಂಗೇರಿಯ ಬಿಡಿಎ ಅಪಾರ್ಟ್‍ಮೆಂಟ್ ಬಳಿಯ ಶೆಡ್‍ ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ಕೂಲಿ ಕಾರ್ಮಿಕ ಮೊಹ್ಮದ್ ಜಿಂದಾರ್ (23)ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಆರ್ಚಿಡ್ ಇಂಟರ್ ನ್ಯಾಷನಲ್ ಸ್ಕೂಲ್‍ ನ ಮಕ್ಕಳಾದ ಗ್ರೀಶ್ಮಾ,ಓಮೂರ್, ಸಮೀರ್, ಸಾಹೀರ್, ಯೋಗೇಶ್ ಹಾಗೂ ಶಾಲೆಯ ಆಯಾ ನಾಗಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ನಲ್ಲಿದ್ದ ಸಾಯಿಕುಮಾರ್, ವಿಸ್ಮಯ್ ಅವರಿಗೂ ಗಾಯವಾಗಿದ್ದು, ಬಸವೇಶ್ವರ ನಗರದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ 8.20ರ ವೇಳೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಚಾಲಕ ದುಬಾಸಿ ಪಾಳ್ಯ ಜಂಕ್ಷನ್ ಬಳಿ ವೇಗವಾಗಿ ಯು ತಿರುವು ತೆಗೆದುಕೊಂಡು ರಸ್ತೆ ದಾಟುತ್ತಿದ್ದ ಮೊಹ್ಮದ್ ಜಿಂದಾರ್ ಮೇಲೆ ಹರಿಸಿದ್ದಾನೆ. ನಂತರ ಬೈಕ್ ಹಾಗೂ ಬಿಎಂಟಿಸಿ ಬಸ್‍ ಗೆ ಡಿಕ್ಕಿ ಹೊಡೆದಿದ್ದು, ಬಸ್ ಪಲ್ಟಿ ಹೊಡೆದಿದೆ.

ಬಿಎಂಟಿಸಿ ಬಸ್ ನ ಮುಂಭಾಗದ ಗಾಜು ಒಡೆದಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಶಂಕರ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ