ಸಿಎಂ ಸಿದ್ದು ರಿಟರ್ನ್.. 

Kannada News

04-10-2017

ಸಿಎಂ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವುದು ಖಚಿತವಾಗಿದ್ದು, ರಾಜಕೀಯ ಕಾರಣಗಳಿಂದಾಗಿ ಉತ್ತರ ಕರ್ನಾಟಕದಿಂದ ಕಣಕ್ಕಿಳಿಯುತ್ತಾರೆ ಎಂಬುದಕ್ಕೆ ಬಹುತೇಕ ತೆರೆ ಬಿದ್ದಿದೆ.

ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿರುವುದು ಬಿಜೆಪಿ. ಹೀಗಾಗಿ ರಾಜ್ಯದ ಉತ್ತರ ಭಾಗದಲ್ಲಿ ಈ ಸಮುದಾಯದ ಮತ ಕಳೆದುಹೋಗಬಾರದೆಂದು ಬಿ.ಎಸ್.ಯಡಿಯೂರಪ್ಪರನ್ನ ಬಹುತೇಕವಾಗಿ ತೇರದಾಳದಿಂದ ಕಣಕ್ಕಿಳಿಸಲು ಆ ಪಕ್ಷ ಮುಂದಾಗಿದೆ.

ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಉತ್ತರ ಕರ್ನಾಟಕದಿಂದ ಸಿದ್ದುವನ್ನ ಕಣಕ್ಕಿಳಿಸುತ್ತೆ ಎಂಬ ಸೂಚನೆಗಳಿದ್ದವು. ಆದರೆ ಇದಕ್ಕೆ ಹೆಚ್ಚು ಆಸಕ್ತಿ ವಹಿಸದ ಸಿದ್ದು, ಮುಂದಿನ(2018) ಚುನಾವಣೆಯೇ ನಾನು ಸ್ಪರ್ಧಿಸಲಿರುವ ಅಂತಿಮ ಚುನಾವಣೆ, ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂಬ ಮನವರಿಕೆಯನ್ನ ವರಿಷ್ಟರಿಗೆ ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಶೇಖರ ಮೂರ್ತಿಯಂಥವರು ಗೆದ್ದುಬರುತ್ತಿದ್ದರು. 1983 ರಲ್ಲಿ ಸಿದ್ದರಾಮಯ್ಯ ಪಕ್ಷೇತರವಾಗಿ ಗೆಲ್ಲುವ ಮೂಲಕ ರಾಜಕೀಯದಲ್ಲಿ ಅಸ್ತಿಭಾರ ಹಾಕಿದರು. ತದನಂತರದಲ್ಲಿ ರಾಮಕೃಷ್ಣ ಹೆಗ್ಡೆ, ಇವರಿಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿಸಿದರು. ಬಳಿಕ ಮಂತ್ರಿಯಾಗಿ, ತನ್ನ ರಾಜಕೀಯ ನೆಲೆ ಗಟ್ಟಿ ಮಾಡಿಕೊಂಡ ಸಿದ್ದು ಮತ್ತು ದೇವೇಗೌಡ ಕಾಂಬಿನೇಷನ್ ಜನತಾ ಪರಿವಾರವನ್ನು ಬಲಿಷ್ಠಗೊಳಿಸಿತು.

ತದನಂತರ ಇದೇ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ದ್ವೇಷವುಂಟಾಗಿ, ಉಪಮುಖ್ಯಮಂತ್ರಿ ಸ್ಥಾನ, ಶಾಸಕ ಸ್ಥಾನವನ್ನ ಬಿಟ್ಟು, ದಳವನ್ನ ತೊರೆದು ಸಿದ್ದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ, 2006ರಲ್ಲಿ ಉಪಚುನಾವಣೆಗೆ ನಿಂತರು.. ಅದು ತೀವ್ರ ಹಣಾಹಣಿಯ ಚುನಾವಣೆಯಾಗಿತ್ತು. ಕೂದಲೆಳೆ ಅಂತರದಲ್ಲಿ ಸಿದ್ದು ಗೆದ್ದರು. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯಗೆ ರಾಜಕೀಯ ಜನ್ಮ ಮತ್ತು ಮರು ಜನ್ಮ ನೀಡಿದ ಕ್ಷೇತ್ರ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ರಚನೆಯಾದ ವರುಣ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ, ಗೆದ್ದು ಮುಖ್ಯಮಂತ್ರಿಯೂ ಆದರು.

ಆದರೀಗ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕೊನೆಯದಾಗಿ ಸ್ಪರ್ಧಿಸಿ, ಆನಂತರದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಆಶಯವನ್ನೊಂದಿದ್ದಾರೆ. ಹಾಗೆ ನೋಡಿದರೆ ಈ ಸಲ ಮುಖ್ಯಮಂತ್ರಿಯಾದಾಗಲೂ ಇದೇ ನನ್ನ ಕೊನೆ ಚುನಾವಣೆ ಎಂದೇಳಿ ಕೊಂಡಿದ್ದರೂ, ನಂತರ ಆ ಹೇಳಿಕೆಯನ್ನ ವಾಪಸ್ಸು ಪಡೆದಿದ್ದರು. ಕೊಪ್ಪಳದಿಂದ ಸ್ಫರ್ಧಿಸುವ ಸಾಧ್ಯತೆಗಳಿವೆ ಎಂಬುದೆಲ್ಲಕ್ಕು ಈಗ ತೆರೆ ಬಿದ್ದಿದೆ. ಹಾಲಿ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರವನ್ನ ತನ್ನ ಪುತ್ರ ಡಾ.ಯತೀಂದ್ರನಿಗೆ ಬಿಟ್ಟು ಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮತ್ತೆ ವಾಪಸ್ಸು ಹೋಗುವುದು ಖಚಿತವಾಗಿದೆ.

ಈ ಕ್ಷೇತ್ರದ ಹಾಲಿ ಶಾಸಕ ಜನತಾದಳದ ಜಿ.ಟಿ.ದೇವೇಗೌಡರನ್ನ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‍ ಗೆ ಎಳೆದುಕೊಳ್ಳುವ ಕುರಿತಂತೆಯೂ ಪ್ರಯತ್ನ ಮುಂದುವರಿಸಿರುವ ಸಿದ್ದರಾಮಯ್ಯ, ಕೊನೆಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಳುತ್ತಿದ್ದಾರೆ.

ವರದಿ: ಜಿ.ಆರ್.ಸತ್ಯಲಿಂಗರಾಜು


ಸಂಬಂಧಿತ ಟ್ಯಾಗ್ಗಳು

ಸಿಎಂ ಸಿದ್ದು ರಿಟರ್ನ್..  ರಿಟರ್ನ್.. 


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ