ಅಭಿವೃದ್ಧಿ ಏನಿಲ್ಲ: ಕೇವಲ ಜಾಹೀರಾತು ವೈಭವ

Kannada News

03-10-2017 251

ಬೆಂಗಳೂರು: ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1,29,82,493.93 ಕೋಟಿ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ರಾಜ್ಯಕ್ಕೆ ಹಣ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ನೀಡಿರುವ ಹಣ ರಾಜ್ಯದ ಒಂದು ವರ್ಷದ ಬಜೆಟ್ ಗಿಂತ  ಹೆಚ್ಚಿದೆ. ಆದರೂ ಹಣ ನೀಡಿಲ್ಲ ಎಂದು ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರ ಇಷ್ಟು ದೊಡ್ಡ ಮೊತ್ತದ ಹಣ ನೀಡಿದ್ದರೂ ಈ ಹಣ ಎಲ್ಲಿ ಹೋಯಿತು. ಏನಾಯಿತು, ಯಾವ ಯೋಜನೆಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಹಣವನ್ನು ಸಿದ್ದರಾಮಯ್ಯನವರು ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ದರೂ ಸರ್ಕಾರ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳದಿರುವುದು ನಾಚಿಕೆಗೇಡು. ಯಾವುದೇ ಹಳ್ಳಿಗೆ ಹೋದರೂ ರಸ್ತೆ ಸರಿಯಿಲ್ಲ, ಕುಡಿಯುವ ನೀರಿನ ಸೌಕರ್ಯ ಇಲ್ಲ. ದನಕರುಗಳಿಗೆ ಮೇವು ಇಲ್ಲ ಎಂದು ಅವರು ಟೀಕಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಹಣದ ಮೂರು ವರ್ಷಗಳ ವಿವರಗಳ ಅಂಕಿ-ಅಂಶಗಳ ಸಹಿತ ವಿವರ ನೀಡಿದ ಶೆಟ್ಟರ್, ಮೆಟ್ರೋ ರೈಲಿಗೆ, ರೈಲ್ವೆ ಯೋಜನೆಗಳಿಗೆ ಬಿಡುಗಡೆಯಾದ ಹಣದ ಮಾಹಿತಿಯನ್ನು ನೀಡಿದರು. ಮೆಟ್ರೋ ಯೋಜನೆಗೆ ಒಟ್ಟು 3694 ಕೋಟಿ, ರೈಲ್ವೆ ಯೋಜನೆಗಳಿಗೆ 9989.78 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು.

ದೇಶಪಾಂಡೆ ಹೇಳಿಕೆ ಸುಳ್ಳು: ಕಳೆದ ನಾಲ್ಕು ವರ್ಷಗಳಲ್ಲಿ ಏಕಗವಾಕ್ಷಿ ಯೋಜನೆಯಡಿ 3.34 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂಬ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ಹೇಳಿಕೆ ಸುಳ್ಳು. ನಾಲ್ಕು ವರ್ಷಗಳಲ್ಲಿ ಹೂಡಿಕೆಯಾಗಿರುವುದು 2.41 ಲಕ್ಷ ಕೋಟಿ ಮಾತ್ರ. ನಾಲ್ಕು ವರ್ಷಗಳಲ್ಲಿ 980 ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರೂ 125 ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದೆ. ಅನುಮೋದನೆ ನೀಡುವುದು ಮುಖ್ಯವಲ್ಲ, ಯೋಜನೆ ಅನುಷ್ಠಾನ ಮುಖ್ಯ. ಕಳೆದ 4 ವರ್ಷಗಳಲ್ಲಿ 6.55 ಲಕ್ಷ ಉದ್ಯೋಗ ಗುರಿ ಇತ್ತು. ಆದರೆ ಉದ್ಯೋಗ ದೊರಕಿದ್ದು ಕೇವಲ 2.60 ಲಕ್ಷ ರೂ. ಮಾತ್ರ ಎಂದು ಹೇಳಿದರು.

ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡದಿದ್ದರೂ ಸಿದ್ದರಾಮಯ್ಯ ಕಾಮ್ ಕಿ ಬಾತ್ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದರು. ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಜಾಹೀರಾತುಗಳ ವೈಭವೀಕರಣ ನಡೆದಿದೆ. ಜಾಹೀರಾತುಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡಲಾಗಿದೆ ಎಂದು ದೂರಿದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ