ಗೀತಾವಿಷ್ಣು ಅಪಘಾತ ಪ್ರಕರಣ ಸಿಸಿಬಿಗೆ !

Kannada News

03-10-2017

ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಚಿಕಿತ್ಸೆ ಪಡೆಯುತ್ತಿದ್ದ, ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿರುವ ಉದ್ಯಮಿ ದಿ.ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ವಹಿಸಿದ್ದಾರೆ.

ಅಪಘಾತ ನಡೆಸಿದ ಗೀತಾ ವಿಷ್ಣು ಕಾರಿನಲ್ಲಿ ಗಾಂಜಾ ದೊರೆತಿರುವುದು ಸೇರಿದಂತೆ ಪ್ರಕರಣದ ಸಂಬಂಧ ದಾಖಲಿಸಿರುವ ಐದು ಕೇಸ್‍ ಗಳನ್ನು ಸಿಸಿಬಿಗೆ ನಗರ ಟಿ.ಸುನೀಲ್‍ ಕುಮಾರ್ ವರ್ಗಾಹಿಸಿದ್ದು ಪೊಲೀಸರು ಗೀತಾ ವಿಷ್ಣು ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ಅವರಿಬ್ಬರೂ ವಿದೇಶಕ್ಕೆ ಪರಾರಿಯಾಗದಂತೆ ಲುಕ್‍ ಔಟ್ ನೋಟೀಸ್ ಜಾರಿಗೊಳಿಸಲಾಗಿದೆ.

ಸಿಸಿಬಿಯ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ರಚಿಸಲಾಗಿರುವ ವಿಶೇಷ ತನಿಖಾ ತಂಡವು ಪರಾರಿಯಾಗಿರುವ ಗೀತಾ ವಿಷ್ಣುಗಾಗಿ ತೀವ್ರ ಶೋಧ ನಡೆಸಿದೆ ಈ ನಡುವೆ ಗೀತಾ ವಿಷ್ಣುಗೆ ಜಾಮೀನು ಕೋರಿ ಅವರು ಕುಟುಂಬದವರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಪರಾರಿಯಾಗಿರುವ ಗೀತಾ ವಿಷ್ಣು ಅಕ್ಕ ಚೈತನ್ಯ ಜೊತೆಗಿದ್ದು ಇಬ್ಬರು ಮೊಬೈಲ್ ಬಳಸುತ್ತಿಲ್ಲ ಅಲ್ಲದೇ ಫೇಸ್‍ಬುಕ್ ಅಕೌಂಟ್ ಕೂಡ ಕಡಿತಗೊಳಿಸಿದ್ದಾರೆ. ಹೈದರಾಬಾದ್‍ ನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಇಬ್ಬರು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ತೀರ್ಪು ಬರುವವರೆಗೆ ಅವರಿಬ್ಬರನ್ನು ರಕ್ಷಿಸಲಾಗುತ್ತಿದೆ, ಕುಟುಂಬದ ಸದಸ್ಯರು ಸಂಬಂಧಿಕರು ಆದಿಕೇಶವಲು ಅವರ ಅಭಿಮಾನಿಗಳು ಗೀತಾ ವಿಷ್ಣು ಬೆಂಬಲಕ್ಕೆ ನಿಂತಿರುವುದರಿಂದ ಇಬ್ಬರ ಪತ್ತೆ ಕಾರ್ಯ ತಡವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಸೆ.27ರ ಬುಧವಾರ ರಾತ್ರಿ 12.15ರ ಸುಮಾರಿಗೆ ಮದ್ಯ ಹಾಗೂ ಮಾದಕ ಸೇವನೆ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಬೆನ್ಜ್ ಎಸ್‍ಯುವಿ ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಓಮಿನಿ ವ್ಯಾನ್‍ ಗೆ ಡಿಕ್ಕಿ ಮಾಡಿದ್ದ. ಬಳಿಕ ಪರಾರಿಯಾಗುವ ಯತ್ನದಲ್ಲಿ ಮುಂದೆ ಸಾಗಿ ತಿ.ನ.ಶ್ರೀಂ ವೃತ್ತದ ನಾಮಫಲಕ್ಕೆ ಗುದ್ದಿದ್ದ. ಕೊನೆಗೆ ಕಾರು ಲಕ್ಷ್ಮಣ್‍ ರಾವ್ ಪಾರ್ಕ್‍ನ ಫುಟ್‍ ಪಾತ್ ಮೇಲೆ ಹತ್ತಿ ನಿಂತುಕೊಂಡಿತ್ತು. ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದರು. ಇದರಿಂದ ಕೆರಳಿದ್ದ ಸ್ಥಳೀಯರು, ಗೀತಾವಿಷ್ಣುನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆರೋಪಿಯ ಕಾರಿನಲ್ಲಿ 110 ಗ್ರಾಂ ಗಾಂಜಾ ಸಹ ಸಿಕ್ಕಿತ್ತು. ಥಳಿತದಿಂದ ಗಾಯಗೊಂಡಿದ್ದ ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

`ಕಾರಿನಲ್ಲಿ ಗಾಂಜಾ ಪತ್ತೆಯಾಗಿದ್ದರ ಬಗ್ಗೆ ವಿಚಾರಿಸಲು ಸೆ.28ರ ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಆಸ್ಪತ್ರೆಗೆ ಪೊಲೀಸರು ತೆರಳಿದ್ದರು ಈ ವೇಳೆ ಆರೋಪಿಯ ತಾಯಿ ತೇಜಶ್ವರಿ ಹಾಗೂ ಇತರೆ ವೈದ್ಯರು, `ಗೀತಾವಿಷ್ಣು ಐಸಿಯುನಲ್ಲಿದ್ದಾನೆ. ಚುಚ್ಚುಮದ್ದು ನೀಡಲಾಗಿದ್ದು, 10 ತಾಸು ವಿಶ್ರಾಂತಿ ಬೇಕು' ಎಂದರು. ಅಂತೆಯೇ ರಾತ್ರಿ 12.30ಕ್ಕೆ ಹೇಳಿಕೆ ದಾಖಲಿಸಿಕೊಳ್ಳಲು ಹೋದಾಗ, ಇನ್ನೂ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದರು. ಒಬ್ಬ ಹೆಡ್‍ ಕಾನ್‍ ಸ್ಟೆಬಲ್ ಹಾಗೂ ಕಾನ್‍ ಸ್ಟೆಬಲ್ ಅವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅವರ ಕಣ್ತಪ್ಪಿಸಿ ಬೆಡ್ ಸಂಖ್ಯೆ 11ರಲ್ಲಿ ಆತ ಮಲಗಿದ್ದ ವಿಷ್ಣು ಬೆಳಿಗ್ಗೆ  6.15ರ ವೇಳೆಗೆ ತುರ್ತು ನಿರ್ಗಮನ ದ್ವಾರದಿಂದ ಪರಾರಿಯಾಗಿದ್ದನು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ