ಬೈಕ್ ಗೆ ಬಸ್ ಡಿಕ್ಕಿ ಪಾರಾದ ಮಗು !

Kannada News

03-10-2017

ಬೆಂಗಳೂರು: ಅನಾರೋಗ್ಯದ ನಿಮಿತ್ತ ಮೊಮ್ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೈಕ್‍ ನಲ್ಲಿ ಹಿಂದಿರುಗುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ತಮಿಳುನಾಡಿನ ಬಸ್, ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ-ತಾತ ಸ್ಥಳದಲ್ಲೇ ಮೃತಪಟ್ಟಿದ್ದು, ಆಶ್ಚರ್ಯಕರ ರೀತಿಯಲ್ಲಿ ಮೊಮ್ಮಗು ಪಾರಾಗಿರುವ ಘಟನೆ ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ರಸ್ತೆ ಗೋರಿಪಾಳ್ಯ ನಿವಾಸಿಗಳಾದ ಅಂಥೋಣಿ ಜೋಸೆಫ್ (55), ಮತ್ತು ಸಗಾಯ ಮೇರಿ(53) ಮೃತಪಟ್ಟ ದಂಪತಿ.

ಈ ದಂಪತಿಯ ಆರು ವರ್ಷದ ಮೊಮ್ಮಗನಿಗೆ ಅನಾರೋಗ್ಯವಿದ್ದ ಕಾರಣ ಬೈಕ್‍ ನಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ರಾತ್ರಿ 11 ಗಂಟೆ ಸಂದರ್ಭದಲ್ಲಿ ಜೆ.ಜೆ.ನಗರಕ್ಕೆ ಹಿಂದಿರುಗುತ್ತಿದ್ದರು. ಕೆ.ಆರ್.ಮಾರ್ಕೆಟ್ ಫ್ಲೈಓವರ್ ಬಳಿ ಹಿಂದಿನಿಂದ ಅತಿ ವೇಗವಾಗಿ ಬಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಇವರ ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಮೊಮ್ಮಗ ಒಂದು ಬದಿಗೆ ಬಿದ್ದರೆ, ದಂಪತಿ ಬಸ್‍ ನ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಮ್ಮಗುವಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಪೇಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ