ಈ ಸಮಾಜವಾದ ಅಂದರೇನು..?

Kannada News

03-10-2017 2519

ಇತ್ತೀಚಿನ ದಿನಗಳಲ್ಲಿ ನಾವು ಆಗಾಗ ಸಮಾಜವಾದ, ಸಮಾಜವಾದಿ ನಾಯಕರು, ಸಮಾಜವಾದಿ ಚಿಂತನೆ ಇತ್ಯಾದಿಗಳ ಬಗ್ಗೆ  ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ಇದರ ಜೊತೆಗೆ, ಇವತ್ತಿನ ದಿನಗಳಲ್ಲಿ ಸಮಾಜವಾದಿಗಳೇ ಇಲ್ಲ, ಇರುವವರೆಲ್ಲರೂ ಮಜಾವಾದಿಗಳು ಎಂಬ ಆರೋಪದ ಮಾತುಗಳೂ ಕಿವಿಗೆ ಬೀಳುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಈ ಸಮಾಜವಾದ ಅಂದರೇನು? ಇಂಥದ್ದೊಂದು ಪರಿಕಲ್ಪನೆ ಹುಟ್ಟಿದ್ದಾದರೂ ಎಲ್ಲಿಂದ? ಭಾರತಕ್ಕೂ ಸಮಾಜವಾದಕ್ಕೂ ಏನು ಸಂಬಂಧ? ಇದೀಗ ಬಿಜೆಪಿಯವರೂ ಕೂಡ ಸಮಾಜವಾದವನ್ನು ಪಾಲನೆ ಮಾಡುತ್ತಿದ್ದಾರ..? ನಿಜವಾಗಲೂ ಪ್ರಧಾನಿ ಮೋದಿ ಅವರು, ಸಮಾಜವಾದಿ ಸಿದ್ಧಾಂತವನ್ನು ಜಾರಿಗೆ ತರುತ್ತಿದ್ದಾರ..?  ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಒಂದು ವಿಶೇಷ ವರದಿ. 
ಎಲ್ಲಕ್ಕಿಂತ ಮೊದಲು, ಸಮಾಜವಾದ ಅನ್ನುವುದನ್ನು ಮತ್ತು ಅದಕ್ಕಿರುವ ಹಲವು ಮಗ್ಗುಲುಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಸಮಾಜವಾದ ಎಂದರೇನು ಎಂದು ವಿವರಿಸುವುದು ಸುಲಭದ ಮಾತಲ್ಲ. ಸಮಾಜವಾದ ಅನ್ನುವ ಪದ, ಅವರವರಿಗೆ ಅವರವರದ್ದೇ ಆದ ದೃಷ್ಟಿ ಕೋನದ ಅರ್ಥ ನೀಡುತ್ತದೆ. 1833ರಲ್ಲಿ ಪೂರ್ ಮ್ಯಾನ್ಸ್ ಗಾರ್ಡಿಯನ್ ಎಂಬ ಪತ್ರಿಕೆಯಲ್ಲಿ ಮೊದಲ ಬಾರಿಗೆ ಸಮಾಜವಾದ ಅನ್ನುವ ಪದ ಬಳಸಲಾಯಿತು. 1835ರಲ್ಲಿ ರಾಬರ್ಟ್ ಓವನ್ ಸ್ಥಾಪಿಸಿದ ‘ಅಸೋಸಿಯೇಷನ್ ಆಫ್ ಆಲ್ ಕ್ಲಾಸಸ್ ಅಂಡ್ ಆಲ್ ನೇಷನ್ಸ್’ ಸಂಸ್ಥೆಯಲ್ಲಿ ನಡೆಯುತ್ತಿದ್ದ ಚರ್ಚೆಗಳ ವೇಳೆ ಬಳಕೆಯಾದ ಸೋಷಿಯಲಿಸ್ಟ್ ಮತ್ತು ಸೋಷಿಯಲಿಸಮ್ ಎಂಬ ಪದಗಳು ಜನಪ್ರಿಯವಾದವು. 
ಸಮಾಜವಾದ ಅನ್ನುವುದು, ಸಮಾನತೆಯ ತತ್ವ ಪ್ರತಿನಿಧಿಸುತ್ತದೆ. ಸಮಾನ ಕಾನೂನು, ಸಮಾನ ನ್ಯಾಯ, ಸಮಾನ ಅವಕಾಶ ಮತ್ತು ಸಮಾನ ಅಭಿವೃದ್ಧಿ ಮತ್ತು  ಶಿಕ್ಷಣ ಪಡೆಯುವಲ್ಲಿ ಸಮಾನತೆಯನ್ನು ಸಾರುತ್ತದೆ.
ಸಮಾಜವಾದ, ರಾಜಕೀಯ ಸಿದ್ಧಾಂತದ ಜೊತೆಗೆ ರಾಜಕೀಯ ಆಂದೋಲನವನ್ನೂ ಸೂಚಿಸುತ್ತದೆ. ಹೀಗಾಗಿ, ಸಮಾಜವಾದ ಅನ್ನುವುದು, ಒಂದು ಸಿದ್ಧಾಂತ ಅಥವ ಹಲವು ಸಿದ್ಧಾಂತಗಳನ್ನು ಒಗ್ಗೂಡಿಸಿದ ಒಂದು ವ್ಯವಸ್ಥೆ ಮತ್ತು ಹಲವು ಚಳವಳಿಗಳು ಒಟ್ಟಾಗಿ ಸೇರಿದ ಒಂದು ಚಳವಳಿಯೂ ಆಗಿದೆ.
ಕಳೆದ ಒಂದು ಶತಮಾನದಿಂದಲೂ, ಸಮಾಜವಾದ ಅನ್ನುವ ಪದವನ್ನು ಹಲವು ರೀತಿಯ ಸಾಮಾಜಿಕ ಸಿದ್ಧಾಂತಗಳನ್ನು ವಿವರಿಸಲು, ನಿರೂಪಿಸಲು ಬಳಸಿಕೊಳ್ಳಲಾಗಿದೆ.  

ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಾಜವಾದ ಅನ್ನುವುದನ್ನು, ಯಾವುದೇ ಒಂದು ಸಿದ್ಧಾಂತವನ್ನು ವರ್ಣಿಸಲು ಬಳಸುವುದಕ್ಕಿಂತ ಹೆಚ್ಚಾಗಿ, ಹಲವು ದೇಶಗಳಲ್ಲಿನ ಚಳವಳಿಗಳನ್ನು ಹೆಸರಿಸಲು ಮತ್ತು ತಾವು ಸಮಾಜವಾದ ಅನ್ನುವ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆಂದು ತಿಳಿಸುವ ಸಲುವಾಗಿ ಬಳಸಲಾಗುತ್ತಿದೆ. ಆಧುನಿಕ ಜಗತ್ತಿನಲ್ಲಿ ಇಂಗ್ಲೆಂಡಿನ ಔದ್ಯೋಗಿಕ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿಗಳು, ಸಮಾಜವಾದದ ಹುಟ್ಟಿಗೆ ಕಾರಣವಾದವು. ಬಂಡವಾಳ ಶಾಹಿಗಳಿಂದ ಆಗುತ್ತಿದ್ದ ಕಾರ್ಮಿಕರ ಶೋಷಣೆ ನಿವಾರಿಸಿ, ಅವರ ಅಭಿವೃದ್ಧಿ ಸಾಧಿಸಬೇಕು ಅನ್ನುವ ಹಂಬಲವೇ ಸಮಾಜವಾದಿ ಸಿದ್ಧಾಂತದ ಬೆಳವಣಿಗೆಗೆ ಕಾರಣವಾಯಿತು.
ಆಕ್ಸ್ ಫರ್ಡ್ ನಿಘಂಟಿನ ಪ್ರಕಾರ, ಸಮಾಜವಾದ ಅನ್ನುವುದು, ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಗಳು, ಸರ್ಕಾರದ ಒಡೆತನದಲ್ಲಿರುವ ಒಂದು ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ.  ಸಮಾಜವಾದ ಅನ್ನುವುದನ್ನು ಈ ರೀತಿ ವಿವರಿಸಿರುವುದರ ಹಿಂದೆ, ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ಅವರ ಬರವಣಿಗೆಯ ಪ್ರಭಾವ ಇದೆ.  ಈ ಇಬ್ಬರೂ ಚಿಂತಕರು, ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ದುಡಿಯುವ ವರ್ಗದವರ ಶೋಷಣೆ ಆಗುತ್ತಿರುವುದನ್ನು ಕಂಡು ದುಃಖಿತರಾಗಿದ್ದರು. ಕೈಗಾರಿಕೆಗಳ ಮಾಲೀಕರು, ತಮ್ಮ ಕಾರ್ಮಿಕ ವರ್ಗಕ್ಕೆ ಅವರು ಉತ್ಪಾದಿಸುವ ವಸ್ತುಗಳ ಮೌಲ್ಯಕ್ಕಿಂತ ತುಂಬಾ ಕಡಿಮೆ ಕೂಲಿ ಕೊಡುತ್ತಾರೆ, ಇದರಲ್ಲಿ ಉಳಿಯುವ ಹೆಚ್ಚಿನ ಭಾಗವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ, ಇದು ಶೋಷಣೆ ಎಂದು ಪ್ರತಿಪಾದಿಸುತ್ತಿದ್ದರು.
ಇದರ ಬದಲಿಗೆ, ಒಂದು ಸಮಾಜವಾದಿ ಆರ್ಥಿಕ ವ್ಯವಸ್ಥೆ ಇದ್ದರೆ, ಅದು ಇಂಥ ಶೋಷಣೆ ಮತ್ತು ಅಸಮಾನತೆಗಳನ್ನು ನಿವಾರಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದರು. 
ಹೀಗಾಗಿ, ಸಮಾಜವಾದಿ ವ್ಯವಸ್ಥೆಯ ಗುರಿಗಳು, ವರ್ಗ ವ್ಯವಸ್ಥೆಯನ್ನು ತೊಲಗಿಸಿ, ಶೋಷಣೆ ಮತ್ತು ದೌರ್ಜನ್ಯವನ್ನು ಹೋಗಲಾಡಿಸುತ್ತವೆ. ಇಂಥ ಹೊಸ ವ್ಯವಸ್ಥೆ, ದುರಾಸೆ ಮತ್ತು ಲಾಭಕೋರತನವನ್ನು ನಿವಾರಿಸಿ ಎಲ್ಲರ ಒಳಿತಿಗೆ ಕಾರಣವಾಗುತ್ತದೆ ಅನ್ನುವುದು ಅವರ ನಂಬಿಕೆಯಾಗಿತ್ತು. 
ಸಮಾಜವಾದ ಅಂದರೆ, ಎಲ್ಲರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಾನತೆ ಹೊಂದಿರುವ ಸಮಾಜವನ್ನು ಹೊಂದಿರುವುದು ಎಂದು ಅರ್ಥ. ಸಮಾಜವಾದ ಅನ್ನುವುದು, ಪ್ರತಿಯೊಬ್ಬರೂ ಸಮಾನರು ಎಂಬ ತತ್ವದಲ್ಲಿ ಮತ್ತು  ಪ್ರತಿಯೊಬ್ಬ ಮಾನವನ ಘನತೆಯಲ್ಲಿ ನಂಬಿಕೆ ಇಡುತ್ತದೆ. ಸಮಾಜದ ಆಸ್ತಿ ಕೆಲವೇ ಕೆಲವು ಜನರಲ್ಲಿ ಸೇರಿಕೊಳ್ಳುವ ವ್ಯವಸ್ಥೆಯನ್ನು ಸಮಾಜವಾದ ಒಪ್ಪುವುದಿಲ್ಲ. ಸಮಾಜವಾದಿ ವ್ಯವಸ್ಥೆಯಲ್ಲಿ, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಶೋಷಣೆ ಮಾಡುವುದಿಲ್ಲ. 
ಸಮಾಜವಾದ ಅನ್ನುವುದು, ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಟ ಆರ್ಥಿಕ ಅನುಕೂಲತೆಯನ್ನಾದರೂ ಒದಗಿಸುವ ಗುರಿ ಹೊಂದಿರುತ್ತದೆ.  ದುಡಿಯುವ ವರ್ಗದವರ ಶ್ರಮಕ್ಕೆ ತಕ್ಕ ಪ್ರತಿಫಲ, ವಿರಾಮ, ಮನರಂಜನೆ ಸಿಗುವಂತೆ ಮಾಡುವುದು ಹಾಗೂ ವಯಸ್ಸಾದವರು ಹಾಗೂ ಅಂಗವಿಕಲರ ಬಗ್ಗೆ ಕಾಳಜಿ ವಹಿಸುವಂಥ ವ್ಯವಸ್ಥೆ ರೂಪಿಸುವುದು ಸಮಾಜವಾದದ ಉದ್ದೇಶ. ಬಂಡವಾಳಶಾಹಿತನ ಅನ್ನುವುದು ಸ್ಪರ್ಧಾತ್ಮಕವಾದದ್ದು ಮತ್ತು  ಘಾತುಕವಾದ್ದು. ಸಮಾಜವಾದ ಅನ್ನುವುದು, ಸಹಕಾರ ಮತ್ತು ಸೌಹಾರ್ದದಿಂದ ಕೂಡಿದ್ದು. ಬಂಡವಾಳ ಶಾಹಿ ವ್ಯವಸ್ಥೆ ಸಮಾಜವನ್ನು ಒಡೆಯುತ್ತದೆ, ಸಮಾಜವಾದ ಸಮಾಜವನ್ನು ಒಗ್ಗೂಡಿಸುತ್ತದೆ.  
ಸಮಾಜವಾದ, ಆರ್ಥಿಕ ಸಂಪನ್ಮೂಲಗಳನ್ನು ಸಮನಾಗಿ ಹಂಚುವುದರ ಬಗ್ಗೆ, ನಿರುದ್ಯೋಗ ನಿರ್ಮೂಲನೆ ಬಗ್ಗೆ, ಅಭದ್ರತೆ ನಿವಾರಣೆ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತದೆ. ಸಾಮಾಜಿಕ ನ್ಯಾಯ ಅನ್ನುವುದು, ‘ಪ್ರತಿಯೊಬ್ಬನಿಂದ ತನ್ನ ಶಕ್ತಿಗೆ ಅನುಸಾರವಾಗಿ, ಪ್ರತಿಯೊಬ್ಬನಿಗೆ ಅವನ ಅಗತ್ಯತೆಗಳಿಗೆ ತಕ್ಕಂತೆ’ ಅನ್ನುವುದನ್ನು ವ್ಯಕ್ತಪಡಿಸುತ್ತದೆ.  ಸಮಾಜವಾದ ಅನ್ನುವುದು, ದುಡಿಯುವ ವರ್ಗದ ಎಲ್ಲರಿಗೂ ತಮ್ಮ ಕೊಡುಗೆ ತಕ್ಕ ಪ್ರತಿಫಲ ಲಭ್ಯವಾಗುವಂತೆ ಮಾಡುತ್ತದೆ. ಸಮಾಜವಾದ ಪರೋಪಕಾರಿ ಚಿಂತನೆ ಮತ್ತು ನೈತಿಕ ತತ್ವಾದರ್ಶಗಳ ಮೇಲೆ ಅವಲಂಬಿತವಾಗಿದೆ ಮತ್ತು ಎಲ್ಲರಿಗೂ ಅವರ ಸಾಧನೆಯ ಉತ್ತುಂಗಕ್ಕೇರಲು ಅವಕಾಶ ನೀಡುತ್ತದೆ.
ಸಮಾಜವಾದ  ಅನ್ನುವುದು, ವ್ಯಕ್ತಿವಾದವನ್ನು ವಿರೋಧಿಸುತ್ತದೆ, ಆದರೆ, ಸಮಾಜವಿಲ್ಲದೆ ವ್ಯಕ್ತಿ ತಾನೊಬ್ಬನೇ ಬದುಕಲು ಸಾಧ್ಯವಿಲ್ಲ. ವ್ಯಕ್ತಿಯ ವೈಯಕ್ತಿಕ ಆಸೆ ಆಕಾಂಕ್ಷೆಗಳು, ಸಮಾಜದ ಹಿತಾಸಕ್ತಿಯ ವಿರುದ್ಧವಾಗಿರಬಾರದು. ಅಗತ್ಯಬಿದ್ದರೆ, ಸಮಾಜದ ಹಿತಕ್ಕಾಗಿ ವ್ಯಕ್ತಿ ತನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ತ್ಯಜಿಸಲು ಸಿದ್ಧನಾಗಿರಬೇಕು ಅನ್ನುವುದು ಸಮಾಜವಾದದ ಪ್ರತಿಪಾದನೆ.
ಸಮಾಜವಾದ ಅನ್ನುವುದು, ಖಾಸಗಿ ಆಸ್ತಿ ಅನ್ನುವ ಪರಿಕಲ್ಪನೆಯನ್ನೇ ಕಿತ್ತುಹಾಕುತ್ತದೆ. ಏಕೆಂದರೆ, ಖಾಸಗಿ ಆಸ್ತಿ ಅನ್ನುವುದು ವ್ಯಕ್ತಿಗಳಿಗೆ ಸಂಪತ್ತಿನ ಒಡೆತನ ನೀಡಿ, ಸಮಾಜವನ್ನು ಒಡೆಯುತ್ತದೆ. ಯಾವುದೇ ರೂಪದಲ್ಲಾದರೂ ಖಾಸಗಿ ಆಸ್ತಿ ಹೊಂದುವುದು ಕಳ್ಳತನ, ಅನ್ನುವುದೇ ಸಮಾಜವಾದದ ನಿಲುವು. ಜೀವನದಲ್ಲಿ ಗುಣಾತ್ಮಕ ಬೆಳವಣಿಗೆ ಆಗಬೇಕೇ ಹೊರತು ಸಂಖ್ಯಾತ್ಮಕ ಬೆಳವಣಿಗೆಗೆ ಅವಕಾಶವಿಲ್ಲ. ಸಮಾಜವಾದ ಅನ್ನುವುದನ್ನು ಯೋಜನೆಗಳನ್ನು ಹೊಂದುವ ಒಂದು ವಿಧಾನ ಅನ್ನಬಹುದು. ಇಲ್ಲಿ, ಸಾಂಘಿಕ ಮಾಲೀಕತ್ವದ ಅಡಿಯಲ್ಲಿ ಉತ್ಪಾದನೆ, ಮತ್ತು ವಿತರಣೆಗಳನ್ನು ರಾಜ್ಯ ಅಥವ ಸರ್ಕಾರವೇ ನಿಯಂತ್ರಿಸುತ್ತದೆ. ಕಾರ್ಮಿಕರಿಗೆ ಲಾಭದಾಯಕವಾಗುವ ಮತ್ತು ಪ್ರೋತ್ಸಾಹ ನೀಡುವ ರೀತಿಯಲ್ಲಿ ಕೈಗಾರಿಕೆಗಳ ರಾಷ್ಟ್ರೀಕರಣ ಆಗಬೇಕು ಎಂದು ಸಮಾಜವಾದ ಹೇಳುತ್ತದೆ. ಸಮಾಜವಾದ, ಸಹಕಾರ ತತ್ವದ ಪರ ನಿಲುವು ಪ್ರತಿಪಾದಿಸುತ್ತದೆ. ಸಮಾಜವಾದ, ಅಧಿಕಾರದ ವಿಕೇಂದ್ರೀಕರಣಕ್ಕೆ ಮತ್ತು  ಸುಗಮವಾದ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ. ಯಾವುದೇ ಸಾಮಾಜಿಕ ಬದಲಾವಣೆ ನಿಧಾನವಾಗಿ ಮತ್ತು ಶಾಂತಿಯುತವಾಗಿ ಆಗಬೇಕು ಅನ್ನುವುದು ಸಮಾಜವಾದದ ಆಶಯ. 
ಸಮಾಜವಾದ ಅನ್ನುವುದು, ವ್ಯಕ್ತಿವಾದಕ್ಕೆ ವಿರೋಧವಾದ ಪರಿಕಲ್ಪನೆ. ಅದು ವ್ಯಕ್ತಿ ಅಥವ ವರ್ಗದ ಸ್ವಾರ್ಥದ ವಿರುದ್ಧವಾದ ಮತ್ತು ಸಮಾಜವನ್ನು ವ್ಯಕ್ತಿಗಿಂತ ಮೇಲಿನ ಮಟ್ಟದಲ್ಲಿಡುವ ಚಿಂತನೆ. 
ಸಮಾಜವಾದ ಅನ್ನುವುದು, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಆಧರಿಸಿದೆ. ಎಲ್ಲ ಮನುಷ್ಯರೂ ಸಮಾನರಾಗಿರುವುದರಿಂದ, ಸಮಾಜದ ಎಲ್ಲಾ ಸಂಪತ್ತೂ ಎಲ್ಲರಿಗೂ ನ್ಯಾಯೋಚಿತವಾದ ರೀತಿಯಲ್ಲಿ ವಿತರಣೆ ಆಗಬೇಕು, ಹಾಗಾದಾಗ ಮಾತ್ರವೇ ಸಾಮಾಜಿಕ ನ್ಯಾಯ ಸಿಗುತ್ತದೆ. ಸಮಾಜವಾದ ಅನ್ನುವುದು, ಕಾರ್ಮಿಕರಿಗೆ ಲಾಭದಲ್ಲಿ ನ್ಯಾಯೋಚಿತ ಪಾಲು ಸಿಗುವಂತೆ ನೋಡಿಕೊಳ್ಳುವ ಮೂಲಕ ಅವರು ಮುಷ್ಕರ, ಸತ್ಯಾಗ್ರಹ ಇತ್ಯಾದಿಗಳು ನಡೆಯದಂತೆ ನೋಡಿಕೊಳ್ಳಲು ಉದ್ದೇಶಿಸುತ್ತದೆ. 
ಇವತ್ತು ಬಳಕೆಯಾಗುತ್ತಿರುವ ಅರ್ಥದಲ್ಲಿ ನೋಡುವುದಾದರೆ,  ಸಮಾಜವಾದ ಅನ್ನುವುದನ್ನು, ಒಟ್ಟಾರೆ ಸಮಾಜದ ಲಾಭದ ದೃಷ್ಟಿಯಿಂದ ಅನುಸರಿಸಲಾಗುವ ಒಂದು ಆದರ್ಶಮಯ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಎಂದು ಕರೆಯಬಹುದು.
ಸಮಾಜವಾದ ಅನ್ನುವುದು ಸ್ಪರ್ಧಾತ್ಮಕ ಆರ್ಥಿಕ ವ್ಯವಸ್ಥೆಗೆ ವ್ಯತಿರಿಕ್ತವಾದ ಒಂದು ಕ್ರಮ ಎಂದು ಹೇಳಬಹುದು. ಕೆಲವು ಶತಮಾನಗಳಿಂದಲೂ ಸಮಾಜವಾದ ಅನ್ನುವುದನ್ನು ಹಲವಾರು ಅರ್ಥಗಳನ್ನು ಕಟ್ಟಿಕೊಡುವ ಶಬ್ದವಾಗಿ ಬಳಸಲಾಗುತ್ತಿದೆ.  ಈ ಶಬ್ದ, ಹಲವು ಪೀಳಿಗೆಯ ಸಮಾಜವಾದಿ ಚಿಂತಕರ ಮತ್ತು ಅವರ ಟೀಕಾಕಾರರ ಎಚ್ಚರಿಕೆಯಿಂದ ಕೂಡಿದ ವಿಶ್ಲೇಷಣೆ ಫಲವಾಗಿ ಅರ್ಥಪಡೆದುಕೊಂಡು, ನಿಧಾನವಾಗಿ ಸ್ಪಷ್ಟವಾದ ಮಹತ್ವ ಪಡೆಯುತ್ತಾ ಬಂದಿದೆ. ಒಂದು ಕಾಲದಲ್ಲಿ ಸೋಶಿಯಾಲಿಸಮ್ ಅಂದರೆ ಸಮಾಜವಾದ ಅನ್ನುವುದನ್ನು ಕಮ್ಯುನಿಸಮ್ ಅಂದರೆ ಸಮತಾವಾದ ಎಂಬರ್ಥದಲ್ಲೇ ಹೇಳಲಾಗುತ್ತಿತ್ತು. ಆದರೆ, ಇವೆರಡೂ ಒಂದೇ ಅಲ್ಲ. ಎಲ್ಲಾ ಸಮತಾವಾದಿಗಳು ಸಮಾಜವಾದಿಗಳು, ಆದರೆ ಎಲ್ಲಾ ಸಮಾಜವಾದಿಗಳು ಸಮತಾವಾದಿಗಳಲ್ಲ. ಸೋಶಿಯಾಲಿಸಮ್ ಮತ್ತು ಕಮ್ಯುನಿಸಮ್ ಎರಡೂ ಕೂಡ ಖಾಸಗಿ ಮಾಲೀಕತ್ವದ ಬದಲು ಸಾಮಾಜಿಕ ಒಡೆತನದ ಬಗ್ಗೆಯೇ ಹೇಳುತ್ತವೆ. ಇವೆರಡೂ ವಾದಗಳು, ಖಾಸಗಿ ಆಸ್ತಿ ಮತ್ತು ಲಾಭವನ್ನು ಒಪ್ಪುವುದಿಲ್ಲ. 
ಆದರೆ, ಕಮ್ಯುನಿಸಮ್ ಅಥವ ಸಮತಾ ವಾದ ಅನ್ನುವುದು ವೃತ್ತಿಯಲ್ಲಿನ ವರ್ಗೀಕರಣವನ್ನು ತೆಗೆದುಹಾಕುತ್ತದೆ ಮತ್ತು ಅಗತ್ಯತೆಗಳ ಸಾಮ್ರಾಜ್ಯದಿಂದ, ಸ್ವಾತಂತ್ರ್ಯದ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತದೆ. 
ಕೆಲವು ಬಾರಿ, ಕಮ್ಯುನಿಸಮ್ ಅನ್ನುವುದನ್ನು ಎಲ್ಲರಿಗೂ ಸೇರಿದ ಆಸ್ತಿಗಳಿದ್ದ ಮತ್ತು, ಅವರೆಲ್ಲ ಒಟ್ಟುಗೂಡಿ ಉತ್ಪಾದನೆ ನಡೆಸುತ್ತಿದ್ದ ಮತ್ತು ಬಂದ ಲಾಭವನ್ನು ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದ ಸಂಘಗಳ ಸಂಘಟನೆ ಎಂದು ಹೇಳಲಾಗುತ್ತಿತ್ತು. ಈ ದೃಷ್ಟಿಕೋನದಲ್ಲಿ ನೋಡುವುದಾದರೆ ಸಮಾಜವಾದ ಅನ್ನುವುದು ರಾಜಕೀಯ ಕ್ರಮಗಳ ಮೂಲಕ ಇಡೀ ಸಮಾಜದ ಪುನರ್ ನಿರ್ಮಾಣ ಮಾಡುವುದಾಗಿತ್ತು. ಆದರೆ, ಕಮ್ಯುನಿಸಮ್ ಅನ್ನುವುದು, ಸಾಮಾನ್ಯ ಸಮಾಜದಿಂದ ಪ್ರತ್ಯೇಕಗೊಂಡು, ಕಮ್ಯುನಿಸ್ಟ್ ಸಮಾಜಗಳನ್ನು ಕಟ್ಟಿಕೊಳ್ಳುವುದಾಗಿತ್ತು. 
ಭಾರತದಲ್ಲಿ ಸುಮಾರು 850 ವರ್ಷಗಳಷ್ಟು ಹಿಂದೆ, ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದ ಬಸವಣ್ಣನನ್ನು, ಸಮಾಜವಾದ ಮತ್ತು ಸಮತಾವಾದಗಳ ಹರಿಕಾರ ಎಂದು ಹೇಳಲಾಗುತ್ತದೆ. 
ಭಾರತದಲ್ಲಿ ಸಮಾಜವಾದಿ ಚಳವಳಿ ಅನ್ನುವುದು 20ನೇ ಶತಮಾನದ ಆರಂಭದಲ್ಲಿ ಒಂದು ರಾಜಕೀಯ ಚಳವಳಿಯಾಗಿ ಹಾಗೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಆರಂಭವಾಯಿತು. ರಷ್ಯಾ ಕ್ರಾಂತಿಯ ನಂತರದ ದಿನಗಳಲ್ಲಿ, ಭಾರತದಲ್ಲೂ ಕ್ರಾಂತಿಕಾರಿ ಸಮಾಜವಾದಿ ಗುಂಪುಗಳು ಹುಟ್ಟಿಕೊಂಡವು.  ಭಾರತೀಯ ಕಮ್ಯುನಿಸ್ಟ್ ಪಕ್ಷ 1921ರಲ್ಲಿ ಸ್ಥಾಪನೆ ಆಯಿತು. ಭಾರತದಲ್ಲಿ ಕಾರ್ಲ್ ಮಾರ್ಕ್ಸ್ ಅವರನ್ನು ಒಬ್ಬ ಆಧುನಿಕಾಲದ ಋುಷಿ ಎಂದೇ ಕರೆಯುವಷ್ಟರ ಮಟ್ಟಿಗಿನ ಪ್ರಭಾವ ಸೃಷ್ಟಿಯಾಗಿತ್ತು.
ರೈತರು, ಜಮೀನುದಾರರಿಂದ ಅನುಭವಿಸುತ್ತಿದ್ದ ಕಿರುಕುಳಗಳ ವಿರುದ್ಧ ದನಿ ಎತ್ತಿದ ಸಮಾಜವಾದಿ ಚಳವಳಿ, ಭಾರತದಲ್ಲಿ ಬಹಳ ಬೇಗ ಜನಪ್ರಿಯವಾಯಿತು. 
ಮೊದಲ ಮಹಾಯುದ್ಧದ ನಂತರ ಭಾರತದಲ್ಲಿನ ಕೈಗಾರಿಕೆಗಳಲ್ಲಿ ಭಾರಿ ಹೆಚ್ಚಳ ಆಯಿತು. ಕಾರ್ಮಿಕ ವರ್ಗದ ಸಂಖ್ಯೆ ಹೆಚ್ಚಾಯಿತು. ಇದೇ ವೇಳೆ ಅಗತ್ಯವಸ್ತುಗಳ ಬೆಲೆ ಏರಿಕೆ ಹೆಚ್ಚಾಯಿತು.  ಈ ಎಲ್ಲಾ ಕಾರಣಗಳು  ಭಾರತದಲ್ಲಿ ಕಾರ್ಮಿಕ ಸಂಘಟನೆಗಳ ಹುಟ್ಟಿಗೆ ಕಾರಣವಾದವು, ದೇಶದಲ್ಲಿ ಮುಷ್ಕರಗಳು ನಡೆದವು. 1920ರಲ್ಲಿ ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪನೆ ಆಯಿತು. 1922ರಲ್ಲಿ ಮುಂಬೈನ ಎಸ್.ಎ.ಡಾಂಗೆ ಅವರು ಸೋಷಿಯಲಿಸ್ಟ್ ಎಂಬ ಹೆಸರಿನ ಭಾರತದ ಪ್ರಥಮ ಸಮಾಜವಾದಿ ವಾರ ಪತ್ರಿಕೆ ಆರಂಭಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಮಾಜವಾದಿಗಳೇ ಮೊದಲಿಗರಾಗಿದ್ದರು.
ನೆಹರೂ ಮಾರ್ಗದರ್ಶನದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾಜವಾದಿ ಸಿದ್ಧಾಂತ ಅಳವಡಿಸಿಕೊಂಡಿತ್ತು. 1931ರಲ್ಲಿ ಕರಾಚಿಯಲ್ಲಿ ನಡೆದ  ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ, ದೇಶಕ್ಕೆ ಸಮಾಜವಾದಿ ಮಾದರಿಯ ಅಭಿವೃದ್ಧಿಯ ಗುರಿಯನ್ನು ನಿಗದಿಪಡಿಸಲಾಯಿತು.  ಆದರೆ ಭಾರತದ ಮುಖ್ಯವಾಹಿನಿಯ ರಾಜಕಾರಣ, ವರ್ಗಸಂಘರ್ಷದ ಬದಲು ಗಾಂಧಿವಾದ ಮತ್ತು ಅಹಿಂಸಾತ್ಮಕ ಹೋರಾಟದ ಜೊತೆಗೆ ಗುರುತಿಸಿಕೊಂಡಿತ್ತು. 
ಭಾರತ ಸ್ವತಂತ್ರವಾದ ಬಳಿಕ ದೇಶದ ಪ್ರಮುಖ ಕೈಗಾರಿಕೆಗಳು ಮತ್ತು ಬ್ಯಾಂಕಿಂಗ್ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು. 

ಆದರೆ, 70ರ ದಶಕದ ನಂತರ ಜಾಗತಿಕ ಆರ್ಥಿಕ ಹಿಂಜರಿಕೆ ಉಂಟಾಗಿತ್ತು. ಭಾರತದ ಮೇಲೂ ಇದರ ಪ್ರಭಾವದ ಕಾರಣದಿಂದ, ಸರ್ಕಾರದ ಸಮಾಜವಾದಿ ನೀತಿಗೆ ಸಾಕಷ್ಟು ಹಿನ್ನಡೆ ಆಯಿತು.
90ರ ದಶಕದ ವರೆಗೆ ಭಾರತ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುವಲ್ಲಿ ಸಮಾಜವಾದ ಪ್ರಮುಖ ಪಾತ್ರ ವಹಿಸಿತ್ತು. ಆನಂತರ ದಿನಗಳಲ್ಲಿ, ಭಾರತ, ಮಾರುಕಟ್ಟೆ ಆಧಾರಿತ ಆರ್ಥಿಕತೆಯತ್ತ ಮುಖಮಾಡಿತ್ತು. ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸರ್ಕಾರ, ದೇಶವನ್ನು ವ್ಯವಸ್ಥಿತವಾಗಿ ಸುಧಾರಣೆ, ಖಾಸಗೀಕರಣ ಮತ್ತು ಜಾಗತೀಕರಣಗಳತ್ತ ಕೊಂಡೊಯ್ಯುವ ಪ್ರಕ್ರಿಯೆ ಆರಂಭಿಸಿತ್ತು. ಹೀಗಿದ್ದರೂ ಕೂಡ, ಇವತ್ತಿಗೂ ಭಾರತದ ರಾಜಕೀಯ ರಂಗದ ಮೇಲೆ ಸಮಾಜವಾದದ ಪ್ರಭಾವ ಇದ್ದೇ ಇದೆ. ಭಾರತದ ಬಹುತೇಕ ಪಕ್ಷಗಳು ನಾವು ಪ್ರಜಾತಾಂತ್ರಿಕ ಸಮಾಜವಾದವನ್ನು ಅನುಸರಿಸುತ್ತೇವೆ ಎಂದು ಹೇಳಿಕೊಳ್ಳುತ್ತವೆ.  
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವುದೆಲ್ಲವೂ ಸಮಾಜವಾದಿ ಸಿದ್ಧಾಂತವೇ ಅನ್ನುವ ಮಾತುಗಳನ್ನು ಹೇಳಿದವರು, ಎಡರಂಗದ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ದಿವಂಗತ ಜ್ಯೋತಿ ಬಸು ಅವರು. 
ಸಮಾಜವಾದಿ ಆದರ್ಶಗಳನ್ನು ಎತ್ತಿಹಿಡಿದು ಸ್ವಪ್ರೇರಿತ ಭೂದಾನ ಚಳವಳಿ ಆರಂಭಿಸಿದ ವಿನೋಬಾ ಭಾವೆ, ಡಾ.ಬಿ.ಆರ್. ಅಂಬೇಡ್ಕರ್. ರಾಮ್ ಮನೋಹರ್  ಲೋಹಿಯಾ, ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡಿಸ್ ಭಾರತದ ಪ್ರಸಿದ್ಧ ಸಮಾಜವಾದಿಗಳೆಂದು ಹೆಸರಾದವರು. 
ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡ, ಪ್ರೊ ಎಂ.ಡಿ.ನಂಜುಂಡ ಸ್ವಾಮಿ, ಪಿ.ಲಂಕೇಶ್, ಕೋಣಂದೂರು ಲಿಂಗಪ್ಪ, ಜೆ.ಹೆಚ್.ಪಟೇಲ್ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಸಮಾಜವಾದಿ ಚಳವಳಿಯ ನಾಯಕರಾಗಿದ್ದರು. 
ಇವತ್ತಿಗೂ  ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷ, ಬಹುಜನ್ ಸಮಾಜ್ ಪಕ್ಷಗಳು, ನಾವು ಸಮಾಜವಾದಿ ಸಿದ್ಧಾಂತದ ಆಧಾರದಲ್ಲೇ ರಾಜಕಾರಣ ನಡೆಸುತ್ತೇವೆ ಎಂದು ಹೇಳಿಕೊಳ್ಳುತ್ತವೆ. 
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರದ ಸಿಎಂ ನಿತೀಶ್ ಕುಮಾರ್ ಕೂಡ ಸಮಾಜವಾದಿ ಸಿದ್ಧಾಂತದ ಪ್ರತಿಪಾದಕರು ಎಂದು ಹೇಳಬಹುದು.
ಇದೀಗ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವೂ ಸಮಾಜವಾದವನ್ನು ಮತ್ತೊಮ್ಮೆ ಪ್ರಚಲಿತಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಮಾಜವಾದ ಅನ್ನುವುದು ಭಾರತದಂಥ ದೇಶಕ್ಕೆ ಅತ್ಯಗತ್ಯ ಮತ್ತು ಅನಿವಾರ್ಯ. ಹೀಗಾಗಿ, ಬಿಜೆಪಿಯವರು ಕಾಂಗ್ರೆಸ್ ಪಕ್ಷದವರನ್ನು ಬಯ್ಯುತ್ತಾ ಬಂದರೂ ಕೂಡ, ಅವರಿಗೂ ಕೂಡ ದೇಶದಲ್ಲಿ ಸಮಾಜವಾದವನ್ನು ಆಧರಿಸಿದ ಯೋಜನೆಗಳನ್ನು ಜಾರಿಗೆ ತರದೆ ಬೇರೆ ದಾರಿಯಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ, ಇವತ್ತು ದೇಶವನ್ನು ಕಾಡುತ್ತಿರುವ ಅಸಮಾನತೆ, ಅಸಹಿಷ್ಣುತೆ, ಭ್ರಷ್ಟಾಚಾರ, ಮತ್ತೆ ದೊಡ್ಡದಾಗಿ ಕಂಡುಬರುತ್ತಿರುವ ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ಹೆಣ್ಣು ಭ್ರೂಣ ಹತ್ಯೆ, ರೈತರ ಆತ್ಮಹತ್ಯೆ ಇತ್ಯಾದಿಗಳ ನಿವಾರಣೆಗೆ ಸಮಾಜವಾದದ ಸಿದ್ಧಾಂತದ ಅನುಸರಣೆಯೇ ಪರಿಹಾರವಾಗಿ ಕಂಡುಬರುತ್ತಿದೆ. ಸಂಬಂಧಿತ ಟ್ಯಾಗ್ಗಳು

ಸಮಾಜವಾದ ಅಂದರೇನು..? ಅಂದರೇನು..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಸರಳವಾಗಿ ಅರ್ಥವಾಗುವಂತೆ ವಿವರಣೆ ನೀಡಿದ್ದಿರಿ.ಮುಂದುವರೆದು ಸಮಾಜವಾದ ಮತ್ತು ಸಮತಾವಾದದ ವ್ಯತ್ಯಾಸ ದ ಕಾಲಮ್ ಹಾಕಿ ವಿವರಿಸಿ.ಮಕ್ಕಳಿಗೂ ಶಿಕ್ಷಕ ರಿಗೂ ಇನ್ನೂ ಉಪಯುಕ್ತ..ನನ್ನ ಬೋಧನೆ ಗೆ ಅನುಕೂಲಕರ ವಾಯಿತು.ಧನ್ಯವಾದಗಳು ತಮಗೆ.
  • ಸಾಹೇಬಗೌಡ ಬಿರಾದಾರ
  • ಸಹ ಶಿಕ್ಷಕ
ಸರಳವಾದ ಭಾಷೆ,ಮಕ್ಕಳಿಗೂ,ಶಿಕ್ಷಕ ರಿಗೂ ಸಂಗ್ರಹ ಯೋಗ್ಯವಾದ ಮಾಹಿತಿಯನ್ನು ನೀಡಿದ್ದಿರಿ.ನಾ ಬೋಧಿಸುವ ಪಾಠಕ್ಕೆ ಉಪಯುಕ್ತ ವಾಯಿತು.ಧನ್ಯವಾದಗಳು.
  • ಸಾಹೇಬಗೌಡ ಬಿರಾದಾರ
  • ಸಹ ಶಿಕ್ಷಕ ಸರಕಾರಿ ಪ್ರೌಢಶಾಲೆ ಹೆಗ್ಗನದೊಡ್ಡಿ ತಾ.ಸುರಪುರ