ಸೆಲ್ಫಿ ಹುಚ್ಚು ಮೂವರು ದುರ್ಮರಣ !

Kannada News

03-10-2017

ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿರುವ ದುರ್ಘಟನೆ ನಗರದ ಹೊರವಲಯದ ಬಿಡದಿ ಬಳಿಯ ಮಂಚನಾಯಕನಹಳ್ಳಿ ರೈಲ್ವೆ ಗೇಟ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಸೆಲ್ಫಿ ಹುಚ್ಚಿನಿಂದ  ನಡೆಯುತ್ತಿರುವ ಸಾವು- ನೋವುಗಳಂತಹ ಅನಾಹುತಗಳ ಬಗ್ಗೆ ತಿಳುವಳಿಕೆ ನೀಡಿದರೂ ಎಚ್ಚೆತ್ತುಕೊಳ್ಳದ ಯುವಕರು ಸೆಲ್ಫಿ ಗೀಳಿಗೆ ಬಲಿಯಾಗುತ್ತಿರುವುದಕ್ಕೆ ಈ ದುರ್ಘಟನೆ  ಸಾಕ್ಷಿಯಾಗಿದೆ.

ವಂಡರ್ ಲಾ, ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಹಾಯಾಗಿ ಕಾಲ ಕಳೆಯಲು ಹೊರಟಿದ್ದ ವಿದ್ಯಾರ್ಥಿಳು ರೈಲ್ವೆ ಹಳಿ ಕಂಡಾಕ್ಷಣ ಬೈಕ್ ಸ್ಕೂಟರ್ ನಿಲ್ಲಿಸಿ ಹಳಿಗಳ ಮೆಲೆ ವಿವಿಧ ಭಂಗಿಗಳ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಗೋಲ್ ಗುಂಬಜ್‍ರೈಲು ಬರುವುದನ್ನು ಲೆಕ್ಕಿಸದೇ ರೈಲಿನ ಸಮೇತ ಸೆಲ್ಫಿ ತೆಗೆದುಕೊಳ್ಳಲು ಅಣಿಯಾಗುತ್ತಿದ್ದಂತೆ ಮೂವರ ದೇಹಗಳು ಗುರುತು ಸಿಗದಂತೆ ಛಿದ್ರವಾಗಿ ಹೋಗಿವೆ. ಬೆಳಿಗ್ಗೆ 9ರ ವೇಳೆ ರೈಲ್ವೆ ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಕ್ಕಿ ಗುರುತು ಸಿಗದಂತೆ ಛಿದ್ರಛಿದ್ರವಾಗಿದ್ದರು, ಮಧ್ಯಾಹ್ನದ ವೇಳೆಗೆ ಅವರು ಹುಳಿಮಾವು ನಿವಾಸಿ ರೋಹಿತ್, ಕೋರಮಂಗಲ ನಿವಾಸಿಗಳಾದ ಪ್ರಭು ಮತ್ತು ಆನಂದ್ ಎಂದು ಪತ್ತೆಯಾದರು ಈ ಮೂವರು ಜಯನಗರ ನ್ಯಾಷನಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ.

ವೇಗವಾಗಿ ಬರುತ್ತಿದ್ದ ರೈಲು ಮೂವರಿಗೂ ಡಿಕ್ಕಿ ಹೊಡೆದು  200 ಮೀಟರ್‍ ನಷ್ಟು ಯುವಕರ ದೇಹಗಳನ್ನು  ಎಳೆದೊಯ್ದಿದೆ. ಹೀಗಾಗಿ ಮೂವರ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿದ್ದವು. ರೈಲ್ವೆ ಹಳಿ ಮೇಲೆ ಮಲಗಿಗೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಕಾಲೇಜಿಗೆ ರಜೆ ಇದ್ದರಿಂದ ವಂಡರ್ ಲಾ ನಲ್ಲಿ ಹಾಯಾಗಿ ಕಾಲ ಕಳೆಯಲು ಇಂದು ಬೆಳಿಗ್ಗೆ ಸ್ಕೂಟರ್ ಹಾಗೂ ಬೈಕ್‍ ನಲ್ಲಿ ಹೋಗುತ್ತಿದ್ದ ಈ ಮೂವರು ವಿದ್ಯಾರ್ಥಿಗಳು ಹೊಸ ನಿಕ್ಕರ್ (ಬರ್ಮುಡಾ) ಮತ್ತು ಟೀ ಶರ್ಟ್ ಖರೀದಿಸಿ ಧರಿಸಿ ಬೆಳಿಗ್ಗೆ 9 ರ ವೇಳೆ ವಂಡರ್‍ಲಾ ಬಳಿಗೆ ಬಂದಿದ್ದಾರೆ.

ವಂಡರ್‍ಲಾ ಬೆಳಿಗ್ಗೆ 9.30ರ ನಂತರ ತೆಗೆಯುವುನ್ನು ತಿಳಿದ ವಿದ್ಯಾರ್ಥಿಗಳು, ಅಲ್ಲಿ ಸುತ್ತಮುತ್ತ ತಿರುಗಾಡಲು ಹೋಗಿದ್ದು ಮಂಚನಾಯಕನಹಳ್ಳಿ ಗೇಟ್ ಬಳಿ ಬೈಕ್ ಸ್ಕೂಟರ್ ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು ರೈಲ್ವೆ ಹಳಿಗಳ ಮೇಲೆ ಹೋಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬಿಡದಿ ಮತ್ತು ಚನ್ನಪಟ್ಟಣ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ